ಬೆಂಗಳೂರು: ರಾಜ್ಯ ಚುನಾವಣಾ ರಣಕಣದ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಬಹುಮತದ ಕಮಲ ಅರಳಿಸುವ ಬಿಜೆಪಿ ಕನಸು ಭಗ್ನವಾಗಿದೆ. ಮತಪ್ರಭುಗಳು ಬಿಜೆಪಿಯ ಗದ್ದುಗೆ ನಿರೀಕ್ಷೆಗೆ ತಣ್ಣೀರು ಎರಚಿದ್ದಾರೆ. ಚುನಾವಣಾ ಆಖಾಡದಲ್ಲಿ ಬಿಜೆಪಿಯ ಹಿಂದುತ್ವ ಅಸ್ತ್ರ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ.
ಬಿಜೆಪಿ ಫಲಿತಾಂಶವೂ ಮತದಾರರು ಬಿಜೆಪಿಯ ಪಟ್ಟದ ಕನಸಿಗೆ ತಣ್ಣೀರು ಎರಚಿದ್ದಾರೆ. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಎಂಬ ಪ್ರಧಾನಿ ಮೋದಿ ಕರೆಗೆ ರಾಜ್ಯದ ಮತಪ್ರಭುಗಳು ಹೆಚ್ಚಿನ ಮಣೆ ಹಾಕಿಲ್ಲ. ಆಡಳಿತ ವಿರೋಧಿ ಅಲೆಗೆ ಬಿಜೆಪಿ ಮುಗ್ಗರಿಸಿದೆ. ಡಬಲ್ ಇಂಜಿನ್ ಸರ್ಕಾರದೊಂದಿಗೆ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿಗೆ ಜನರು ಜೈ ಎಂದಿಲ್ಲ.
ಮೋದಿಯ ಅಬ್ಬರದ ಪ್ರಚಾರ, ಅಮಿತ್ ಶಾರ ಚಾಣಕ್ಯತೆಗೆ ರಾಜ್ಯದ ಜನರು ಮಣೆಹಾಕಿಲ್ಲ. ಬಿಜೆಪಿಗೆ ಭ್ರಷ್ಟಾಚಾರ, ಕಮಿಷನ್ ಆರೋಪ ಮುಳುವಾಗಿ ಪರಿಣಮಿಸಿತು. ಹೀಗಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರದ ಕನಸು ಭಗ್ನವಾಗಿದೆ. ಈ ಬಾರಿ ಚುನಾವಣಾ ಅಖಾಡದಲ್ಲಿ ಬಿಜೆಪಿ ನಾನಾ ಅಸ್ತ್ರಗಳೊಂದಿಗೆ ಕಣಕ್ಕಿಳಿದಿತ್ತು. ಇದರಲ್ಲಿ ಪ್ರಮುಖವಾದ ಅಸ್ತ್ರ ಹಿಂದುತ್ವದ ಅಜೆಂಡಾ. ಆದರೆ ಆಡಳಿತ ವಿರೋಧಿ ಅಲೆಗೆ ಬಿಜೆಪಿಯ ಪ್ರಬಲ ಹಿಂದುತ್ವ ಅಸ್ತ್ರವೂ ಗುರಿ ಮುಟ್ಟಲು ವಿಫಲವಾಗಿದೆ.
ಹಿಂದುತ್ವದ ಅಸ್ತ್ರದೊಂದಿಗೆ ಭರ್ಜರಿ ಪ್ರಚಾರ: ಬಿಜೆಪಿ ಈ ಬಾರಿ ರಣಕಣದಲ್ಲಿ ಹಿಂದುತ್ವ ಅಸ್ತ್ರವನ್ನು ಪ್ರಬಲವಾಗಿನೇ ಬಳಸಿತ್ತು. ಮೋದಿಯ ಅಲೆಯೊಂದಿಗೆ ಹಿಂದುತ್ವದ ಅಲೆ ಮೂಡಿಸಿ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಯ ಕನಸಿಗೆ ಮತದಾರರು ಮಣೆ ಹಾಕಿಲ್ಲ. ಬಿಜೆಪಿ ನಾಯಕರು ಈ ಬಾರಿ ಅಖಾಡದಲ್ಲಿ ಹಿಂದುತ್ವದ ಕಾರ್ಡ್ ನ್ನು ಹರಿ ಬಿಟ್ಟಿದ್ದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದ ಅಂಶವನ್ನೇ ದಾಳವಾಗಿಸಿದ ಬಿಜೆಪಿ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಅಸ್ತ್ರವನ್ನು ರಾಜ್ಯಾದ್ಯಂತ ಭರ್ಜರಿಯಾಗಿ ಬಳಸಿತ್ತು. ಬಜರಂಗ ದಳ ನಿಷೇಧಿಸುವ ಮೂಲಕ ಕಾಂಗ್ರೆಸ್ ಬಜರಂಗಿಯ ವಿರೋಧಿಗಳಲಾಗಿದ್ದಾರೆ ಎಂದು ಸ್ವತಃ ಪ್ರಧಾನಿ ಮೋದಿ ಪ್ರಚಾರ ಭಾಷಣದ ವೇಳೆ ಹೇಳುವ ಮೂಲಕ ಹಿಂದುತ್ವದ ಕಾರ್ಡ್ ಬಳಸಿದ್ದರು. ಇಲ್ಲಿವರೆಗೆ ಕಾಂಗ್ರೆಸ್ ಅವರು ರಾಮನ ವಿರೋಧಿಗಳಾಗಿದ್ದರು ಈಗ ರಾಮನ ಬಂಟ ಬಜರಂಗಿಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಹಿಂದೂಗಳ ಮತಸೆಳೆಯಲು ಯತ್ನಿಸಿದರು.
ಪ್ರಚಾರ ವೇಳೆ ಪಿಎಂ ಮೋದಿ 'ಬಜರಂಗಬಲಿ ಕೀ ಜೈ' ಎಂಬ ಘೋಷ ವಾಕ್ಯವನ್ನು ಎಲ್ಲೆಡೆ ಜನರಿಂದ ಹೇಳಿಸಿದ್ದರು. ಆ ಮೂಲಕ ಬಿಜೆಪಿ ಹಿಂದೂ ಕಾರ್ಡನ್ನು ಪ್ರಬಲವಾಗಿ ಬಳಸಿತು. ಇತ್ತ ಬಿಜೆಪಿ ನಾಯಕರು "ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನೊಬ್ಬ ಭಜರಂಗಿ" ಎಂಬ ಪ್ರೊಫೈಲ್ ಪಿಕ್ಚರ್ ನ್ನು ಬಿಜೆಪಿ ನಾಯಕರು ಹಾಕಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಬಿಜೆಪಿ ನಾಯಕರು ಚುನಾವಣಾ ಅಖಾಡದಲ್ಲಿ ಹಿಂದು ಅಲೆ ಮೂಡಿಸಲು ಯತ್ನಿಸಿತು. ರಾಜ್ಯಾದ್ಯಂತ ಬಜರಂಗಬಲಿ ನಿಷೇಧ ಕಾರ್ಡ್, ಕಾಂಗ್ರೆಸ್ ಹಿಂದೂ ವಿರೋಧಿ ಕಾರ್ಡನ್ನು ವ್ಯಾಪಕವಾಗಿ ಬಳಸಿತು.
ಫಲ ನೀಡದ ಬಿಜೆಪಿಯ ಹಿಂದುತ್ವದ ಕಾರ್ಡ್: ಚುನಾವಣಾ ಫಲಿತಾಂಶ ನೋಡಿದರೆ ಬಿಜೆಪಿಯ ಹಿಂದುತ್ವದ ಕಾರ್ಡ್ ಈ ಬಾರಿ ನಿರೀಕ್ಷಿತ ಫಲ ನೀಡಿಲ್ಲ. ಬಜರಂಗ ದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆಯನ್ನೇ ದಾಳವಾಗಿಸಿ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಬಿಜೆಪಿ ನಾಯಕರ ಆರೋಪವನ್ನು ರಾಜ್ಯದ ಜನರು ಗಂಭೀರವಾಗಿ ತೆಗೆದುಕೊಂಡಿಲ್ಲ.
ಅದರಲ್ಲೂ ಬಿಜೆಪಿಯ ಭದ್ರಕೋಟೆ ಕರಾವಳಿ ಕರ್ನಾಟಕದಲ್ಲೂ ಹಿಂದುತ್ವದ ಕಾರ್ಡ್ ಹೆಚ್ಚಿನ ಫಲ ನೀಡಲು ವಿಫಲವಾಯಿತು. ಬಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ, ಕಾಂಗ್ರೆಸ್ ನ ಉಚಿತ ಗ್ಯಾರಂಟಿಗಳ ದಾಳಕ್ಕೆ ಬಿಜೆಪಿಯ ಹಿಂದುತ್ವದ ಕಾರ್ಡ್ ಮುಗ್ಗರಿಸಿದೆ. ಪ್ರಧಾನಿ ಮೋದಿ ಜೈ ಬಜರಂಗ ಬಲಿ ಕೀ ಎಂದು ಹೇಳಿ ಮತಚಲಾಯಿಸಿ ಎಂದು ಕರೆ ನೀಡಿದ್ದರು. ಆದರೆ ಪ್ರಧಾನಿ ಕರೆಗೆ ಮತಪ್ರಭುಗಳು ಮಣೆಹಾಕಿದಂತೆ ಕಂಡಿಲ್ಲ.
ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ಮತ ನೀಡಲು ಹಿಂದುತ್ವದ ದಾಳ ವಿಫಲವಾಗಿದೆ. ಕರಾವಳಿ ಕರ್ನಾಟಕದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅಬ್ಬರದ ರೋಡ್ ಶೋ ನಡೆಸಿದ್ದರು. ಆದರೆ, ಕರಾವಳಿ ಕರ್ನಾಟಕ ಸೇರಿ ಹಳೆ ಮೈಸೂರಿನಲ್ಲೂ ಯೋಗಿ ಆದಿತ್ಯನಾಥ್ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಹಿಂದುತ್ವದ ಐಕಾನ್ ಯೋಗಿ ವರ್ಚಸ್ಸು ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಬಿಜೆಪಿಗೆ ಮುಳುವಾದ ಹಿರಿಯರಿಗೆ ಕೊಕ್ ನೀಡಿ, ಹೊಸಬರಿಗೆ ಮಣೆ ಹಾಕಿದ ಹೊಸ ಪ್ರಯೋಗ!