ಬೆಳಗಾವಿ: ಹಿರೇಬಾಗೇವಾಡಿ ಚೆಕ್ ಪೋಸ್ಟ್ ಬಳಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಳ್ಳಿ ವಶಕ್ಕೆ ಪಡೆಯುವ ಮುನ್ನ ಗಲಾಟೆ ನಡೆದಿದ್ದು ಬಹಿರಂಗವಾಗಿದೆ. ಚೆಕ್ ಪೋಸ್ಟ್ ಬಳಿಯ ಟೀ ಶಾಪ್ನಲ್ಲಿ ಆರೋಪಿಗಳು ಕೈ ಕೈ ಮಿಲಾಯಿಸಿ ಗಲಾಟೆ ಮಾಡಿದ್ದಾರೆ. ಚಹಾ ತಡವಾಗಿ ಕೊಟ್ಟಿದ್ದಕ್ಕಾಗಿ ಅಂಗಡಿ ಮಾಲೀಕನ ಜೊತೆಗೆ ಗಲಾಟೆ ಮಾಡಿಕೊಂಡಿದ್ದು, ಮೂವರು ಸೇರಿಕೊಂಡು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನ ಮೇಲೆ ಹಲ್ಲೆ ಮಾಡಿದ ಕುರಿತು ಸ್ಥಳಿಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹಿರೇಬಾಗೇವಾಡಿ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದರು. ಕಾರು ತಪಾಸಣೆ ಮಾಡಿದಾಗ, 9,87,770 ರೂ. ಮೌಲ್ಯದ 14 ಕೆಜಿ, 111 ಗ್ರಾಂ ಬೆಳ್ಳಿ ಆಭರಣಗಳು ಇರುವುದು ಪತ್ತೆಯಾಗಿದೆ. ಮಹಾರಾಷ್ಟ್ರದ ಉಪರಿಯಿಂದ ಹುಬ್ಬಳ್ಳಿಗೆ ಸೂಕ್ತ ದಾಖಲೆ ಇಲ್ಲದೇ ಆಭರಣಗಳನ್ನು ಸಾಗಿಸಲಾಗಿತ್ತು. ಬೆಳ್ಳಿ ಆಭರಣಗಳ ಜೊತೆಗೆ ಮೂವರು ಆರೋಪಿಗಳನ್ನು ಬಂಧಿಸಿರುವ ಹಿರೇಬಾಗೇವಾಡಿ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
142 ಕೆಜಿ ಬೆಳ್ಳಿ ಆಭರಣ ವಶಕ್ಕೆ ಪಡೆದ ಪೊಲೀಸರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಯಲ್ಲಿ ಗಡಿ ಪ್ರದೇಶದಲ್ಲಿ 30 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಗಡಿ ಭಾಗದಲ್ಲಿ ಪೊಲೀಸ್ ಇಲಾಖೆ ಬಿಗಿಭದ್ರತೆ ಕೈಗೊಂಡಿದೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಿ ಗಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ವನಮಾರಪಳ್ಳಿ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1 ಕೋಟಿ ಐವತ್ತು ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಟು ಬ್ಯಾಗ್ಗಳಲ್ಲಿ ಬೆಳ್ಳಿ ಕಾಲುಂಗರಗಳು ಇರುವುದು ಕಂಡುಬಂದಿದೆ. ಸುಮಾರು 140 ಕೆಜಿಗೂ ಅಧಿಕ ತೂಕವಿದೆ ಎಂದು ಹೇಳಲಾಗಿದೆ. ಕಾರಿನ ಮಾಲೀಕರು ಸರಿಯಾದ ಮಾಹಿತಿ ನೀಡದೇ ಇರುವ ಹಿನ್ನೆಲೆ ಈ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದು, ಔರದ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದಲ್ಲಿ ದಾಖಲೆ ಇಲ್ಲದ ಕೋಟ್ಯಂತರ ರೂ. ನಗದು ಮತ್ತು ಬೆಳ್ಳಿ ಆಭರಣಗಳು ರಾಜ್ಯಕ್ಕೆ ತರಲಾಗುತ್ತಿದೆ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಬೆಳ್ಳಿ ಆಭರಣಗಳನ್ನು ಸಾಗಿಸಲಾಗುತ್ತಿರುವುದು ಕಂಡುಬಂದಿದ್ದು, ಅನಿಲ್, ಗಜಾನನ, ರಾಹುಲ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸರಿಯಾದ ದಾಖಲೆ ಇಲ್ಲದೇ ಬೆಳ್ಳಿ ಕಾಲ ಉಂಗುರ ಪೊಲೀಸ್ ಇಲಾಖೆ ಜಪ್ತಿ ಮಾಡಿದೆ.
''ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಬೀದರ್ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 7.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಮಾಹಿತಿ ನೀಡಿದ್ದಾರೆ.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಜಿಲ್ಲಾದ್ಯಂತ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಡಿಎಸ್‍ಪಿ, ಸಿಪಿಐ, ಪಿಎಸ್‍ಐ ಹಾಗೂ ಸಿಬ್ಬಂದಿಗಳು ತೀವ್ರ ನಿಗಾವಹಿಸಿದ್ದು, ಅಕ್ರಮವಾಗಿ ಸಾಗಿಸುತ್ತಿರುವ ದಾಖಲೆ ರಹಿತ 2.6 ಕೋಟಿ ನಗದು ಹಣ, 10 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಸರಾಯಿ, 35 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯಗಳು, 93 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ವಸ್ತುಗಳು, ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿದ್ದ 3.91 ಕೋಟಿ ರೂ. ಮೌಲ್ಯದ ಬಟ್ಟೆ ಹಾಗೂ ಗೃಹ ಬಳಕೆಯ ವಸ್ತುಗಳು ಸೇರಿದಂತೆ 7.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದು: ಗಡಿಯಲ್ಲಿ ಪೊಲೀಸರ ಸರ್ಪಗಾವಲು..142 ಕೆಜಿ ಬೆಳ್ಳಿ ಕಾಲುಂಗುರ ವಶ, ಎಫ್ಐಆರ್ ದಾಖಲು