ಗಂಗಾವತಿ (ಕೊಪ್ಪಳ):ವಿದ್ಯುತ್ ತಂತಿ ತಗುಲಿ ರೆಕ್ಕೆ ಹಾಗೂ ಕಾಲಿಗೆ ಗಾಯಗಳಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ನವಿಲನ್ನು ಇಲ್ಲಿನ ಜಯನಗರದ ಯುವಕರು ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಗಾಯಗೊಂಡು ಬಿದ್ದಿದ್ದ ನವಿಲಿನ ಮೇಲೆ ದಾಳಿ ಮಾಡುತ್ತಿದ್ದ ನಾಯಿಗಳನ್ನು ಸ್ಥಳೀಯರು ಓಡಿಸಿದ್ದಾರೆ. ಬಳಿಕ ನವಿಲು ಪಕ್ಕದ ಮನೆಯೊಂದರ ಮೇಲೇರಿ ಕುಳಿತುಕೊಂಡಿತ್ತು. ಹಾರಾಡಲಾಗದ ಸ್ಥಿತಿಯಲ್ಲಿದ್ದ ನವಿಲನ್ನು ರಾಮು, ಲಕ್ಷ್ಮಣ ಹಾಗೂ ಫಕೀರಪ್ಪ ಎಂಬವರು ಅಲ್ಲಿಂದ ರಕ್ಷಣೆ ಮಾಡಿದ್ದಾರೆ.
ಬಳಿಕ ನವಿಲನ್ನು ಮನೆಗೆ ಕೊಂಡೊಯ್ದು ನೀರು ಕುಡಿಸಿ, ಆಹಾರ ನೀಡಿದ್ದಾರೆ. ನವಿಲು ಕೊಂಚ ಚೇತರಿಸಿಕೊಂಡಿದೆ. ನಂತರ ಈ ಬಗ್ಗೆ ಗಂಗಾವತಿ ನಗರದ ಡಿಆರ್ಎಫ್ಒ ಶ್ರೀನಿವಾಸ್ ಅವರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಶ್ರೀನಿವಾಸ್ ತಮ್ಮ ಸಿಬ್ಬಂದಿಯನ್ನು ಕಳಿಸಿ, ನವಿಲನ್ನು ಸುಪರ್ದಿಗೆ ಪಡೆದರು.
ಗಂಗಾವತಿ ನಗರ ಫಾರೆಸ್ಟರ್ ಶಿವಾನಂದ ಹಾಗೂ ವಾಚರ್ ಬೂದೇಶ್ವರ ಅವರಿಗೆ ನವಿಲನ್ನು ಹಸ್ತಾಂತರಿಸಲಾಗಿದೆ. ನವಿಲಿಗೆ ಚಿಕಿತ್ಸೆ ಕೊಡಿಸಿ, ಸಂರಕ್ಷಿಸುವಂತೆ ಯುವಕರು ಮನವಿ ಮಾಡಿದ್ದಾರೆ. ವಡ್ಡರಹಟ್ಟಿಯ ನರ್ಸರಿಯಲ್ಲಿ ಸಾಕಷ್ಟು ನವಿಲುಗಳಿದ್ದು, ಅಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.