ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾದಕವಸ್ತು ಸೇವಿಸುವವರ ವಿರುದ್ಧ ಭಾನುವಾರ ಮತ್ತೊಂದು ಹಂತದ ಕಾರ್ಯಾಚರಣೆ ನಡೆದಿದೆ. ಒಟ್ಟು 354 ಜನ ಡ್ರಗ್ಸ್ ಬಳಕೆದಾರರನ್ನು ವಶಕ್ಕೆ ಪಡೆದು, ಹುಬ್ಬಳ್ಳಿ ಕಿಮ್ಸ್ ಮತ್ತು ಧಾರವಾಡದ ಡಿಮ್ಹಾನ್ಸ್ನಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಅವರಲ್ಲಿ ಒಟ್ಟು 156 ಜನರಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ವಿರುದ್ಧ ಹು-ಧಾ ಪೊಲೀಸರ ಸ್ಪೆಷಲ್ ಡ್ರೈವ್: 79 ವಿದ್ಯಾರ್ಥಿಗಳು ವಶಕ್ಕೆ
Published : Aug 19, 2024, 6:54 AM IST
ಈ ಬಗ್ಗೆ ವಿವಿಧ ಠಾಣೆಗಳಲ್ಲಿ ಒಟ್ಟು 38 ಪ್ರಕರಣಗಳನ್ನು ದಾಖಲಿಸಲಾಗಿದೆ. ಡ್ರಗ್ಸ್ ಸೇವನೆ ದೃಢಪಟ್ಟಿರುವ 156 ಜನರಲ್ಲಿ 79 ಜನ ಅವಳಿ ನಗರದ ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಮಾದಕವಸ್ತುಗಳ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಎಲ್ಲ ಡ್ರಗ್ಸ್ ಬಳಕೆದಾರರಿಗೆ ಹುಬ್ಬಳ್ಳಿಯ ಜಗದ್ಗುರು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಮಾದಕ ವಸ್ತುಗಳ ಸೇವನೆ ಮಾಡದಂತೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಪೊಲೀಸರು ಕೌನ್ಸೆಲಿಂಗ್ ನಡೆಸಿದ್ದಾರೆ. ಪೋಷಕರಿಗೂ ಕೂಡ ಮಕ್ಕಳ ಬಗೆಗಿನ ಕಾಳಜಿಯ ಓರಿಯೆಂಟೇಶನ್ ಮಾಡಿದ್ದಾರೆ.