ಸುಳ್ಯ(ದಕ್ಷಿಣ ಕನ್ನಡ):ದರೋಡೆ ಪ್ರಕರಣದ ಆರೋಪಿಯೋರ್ವ ಆರೋಗ್ಯ ತಪಾಸಣೆಗೆ ಕರೆತಂದಾಗ ಪೊಲೀಸರ ವಶದಿಂದ ತಪ್ಪಿಸಿಕೊಂಡು ಓಡಿಹೋದ ಘಟನೆ ಸುಳ್ಯದ ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ. ಆರೋಪಿಯ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.
ಸುಳ್ಯ: ಆರೋಗ್ಯ ತಪಾಸಣೆಗೆ ಕರೆತಂದ ಆರೋಪಿ ಪರಾರಿ; ಮಾಹಿತಿ ನೀಡುವಂತೆ ಪೊಲೀಸರ ಮನವಿ
Published : Oct 6, 2024, 9:59 AM IST
ಸುಳ್ಯ ಠಾಣಾ ವ್ಯಾಪ್ತಿಯ ಸಂಪಾಜೆಯ ಮನೆಯೊಂದರ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ ತಮಿಳುನಾಡು ಮೂಲದ ಕಾರ್ತಿಕ್ (38) ತಪ್ಪಿಸಿಕೊಂಡವ. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಈತನನ್ನು ಪೊಲೀಸರು ಸೆರೆಹಿಡಿದು ಸುಳ್ಯಕ್ಕೆ ಕರೆ ತಂದಿದ್ದರು. ಪ್ರಕರಣದಲ್ಲಿ ಕಾರ್ತಿಕ್ ಜೊತೆಗೆ ತಮಿಳುನಾಡಿನ ನರಸಿಂಹನ್ (40), ಹಾಸನ ಮೂಲದ ಯದುಕುಮಾರ್ (33) ಹಾಗೂ ದೀಕ್ಷಿತ್ (26) ಎಂಬವರನ್ನು ಬಂಧಿಸಲಾಗಿತ್ತು.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಚೀಟಿ ಮಾಡಿಸುತ್ತಿರುವಾಗ, ತನ್ನನ್ನು ಹಿಡಿದುಕೊಂಡಿದ್ದ ಇನ್ನೊಬ್ಬ ಕಾನ್ಸ್ಟೇಬಲ್ರನ್ನು ತಳ್ಳಿ ಆರೋಪಿ ಓಡಿಹೋಗಿದ್ದಾನೆ. ತಕ್ಷಣ ಪೊಲೀಸರು ಬೆನ್ನಟ್ಟಿದರೂ, ಹಿಡಿಯಲಾಗಿಲ್ಲ. ಆರೋಪಿ ಪತ್ತೆಯಾದರೆ ಸುಳ್ಯ ಠಾಣೆಯ 9480805365 ಫೋನ್ ನಂಬರಿಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.