ವೈಕುಂಠ ಏಕಾದಶಿ: ಬಳ್ಳಾರಿ, ದಾವಣಗೆರೆಯ ವೆಂಕಟೇಶ್ವರ ದೇವಾಲಯಗಳಲ್ಲಿ ಭಕ್ತಸಾಗರ - VAIKUNTHA EKADASHI
Published : 8 hours ago
ಬಳ್ಳಾರಿ: ವೈಕುಂಠ ಏಕಾದಶಿ ನಿಮಿತ್ತ ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀ ವೆಂಕಟೇಶ್ವರ ದೇವರ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ವೆಂಕಟರಮಣಸ್ವಾಮಿ ದೇವಾಲಯಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ನಗರದ ಮುನ್ಸಿಪಲ್ ಹೈಸ್ಕೂಲ್ ಬಳಿಯ ವೆಂಕಟೇಶ್ವರ ದೇವಾಲಯ, ರಾಮೇಶ್ವರ ದೇವಾಲಯ, ಪಟೇಲ್ ನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಸ್ವಾಮಿಯ ದರ್ಶನಕ್ಕೆ ಹರಿದು ಬಂದ ಭಕ್ತಾದಿಗಳಿಗೆ ಲಡ್ಡು ಪ್ರಸಾದ ವಿತರಿಸಲಾಯಿತು.
ದಾವಣಗೆರೆ ವೆಂಕಟೇಶ್ವರ ದೇವಾಲಯಕ್ಕೆ ಹರಿದುಬಂದ ಭಕ್ತ ಸಾಗರ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದಾವಣಗೆರೆಯ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಾವಿರಾರು ಭಕ್ತರು ಬೆಳಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ಪುನೀತರಾದರು. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪುಷ್ಪಾಲಂಕಾರ, ಪತ್ರೆ ಅಲಂಕಾರ ಕಣ್ಮನ ಸೆಳೆದವು.
ವೈಕುಂಠ ದ್ವಾರವನ್ನು ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಬಳ್ಳಾರಿ ಹಾಗೂ ದಾವಣಗೆರೆಯ ಎರಡೂ ದೇವಾಲಯಗಳಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಿದ್ದ ವೈಕುಂಠ ದ್ವಾರವನ್ನು ಭಕ್ತರು ಪ್ರವೇಶ ಮಾಡಿದರು. ದೇವರ ಜಪ ಮಾಡುತ್ತಾ ಭಕ್ತರು ವೆಂಕಟೇಶ್ವರನ ದರ್ಶನ ಮಾಡಿದರು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಹರಸಾಹಸಪಡುತ್ತಿದ್ದರು.
ಇದನ್ನೂ ಓದಿ: ವೈಕುಂಠ ಏಕಾದಶಿ: ಮಧ್ಯರಂಗನಾಥ ಸ್ವಾಮಿ ದೇವಾಲಯಕ್ಕೆ ಭಕ್ತಸಾಗರ; ಕಾಡು ನಾರಾಯಣನಿಗೆ ಸಪ್ತದ್ವಾರ ನಿರ್ಮಾಣ