ಮಾರಾಟಕ್ಕಿಟ್ಟಿದ್ದ ಗಣೇಶ ಮೂರ್ತಿಯನ್ನೂ ಬಿಡದೇ ಕದ್ದೊಯ್ದ ಕಳ್ಳರು - Ganesha Idol Theft - GANESHA IDOL THEFT
Published : Sep 13, 2024, 3:39 PM IST
ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡಲು ಇರಿಸಿದ್ದ ಗಣೇಶ ಮೂರ್ತಿಯನ್ನೂ ಬಿಡದೆ ಕಳ್ಳರು ಕದ್ದೊಯ್ದಿರುವ ಘಟನೆ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಆಂಧ್ರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸೆಪ್ಟೆಂಬರ್ 12 ರಂದು ಮಧ್ಯರಾತ್ರಿ 12.45 ರ ಸುಮಾರಿಗೆ ನಡೆದಿರುವ ಘಟನೆ ಪಕ್ಕದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ: ಗಣಪತಿ ಉತ್ಸವಗಳಿಗಾಗಿ ಮಾರಾಟ ಮಾಡಲು ಸುಮಾರು 20-30 ವಿಗ್ರಹಗಳನ್ನು ಅವುಗಳ ಮಾರಾಟಗಾರರು ಆಂಧ್ರಹಳ್ಳಿ ಮುಖ್ಯ ರಸ್ತೆಯಲ್ಲಿ ಇರಿಸಿದ್ದರು. ರಾತ್ರೋರಾತ್ರಿ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಖದೀಮರು, ಮಾರಾಟಕ್ಕೆಂದು ಟರ್ಪಾಲು ಮುಚ್ಚಿ ಇರಿಸಿದ್ದ ಗಣೇಶ ಮೂರ್ತಿಯನ್ನು ಕ್ಷಣಾರ್ಧದಲ್ಲಿ ಕದ್ದು ಒಯ್ದಿದ್ದಾರೆ. ಕಳ್ಳತನ ಆಗಿರುವ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಸಂಬಂಧ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಮಾಹಿತಿ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.