ಗರ್ಭಿಣಿಯನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ತಹಶೀಲ್ದಾರ್- ವಿಡಿಯೋ - Tehsildar Rescued Pregnant - TEHSILDAR RESCUED PREGNANT
Published : Aug 6, 2024, 4:33 PM IST
ಗಡ್ಚಿರೋಳಿ(ಮಹಾರಾಷ್ಟ್ರ): ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ತೊರೆಗಳು ಮೈದುಂಬಿ ಹರಿಯುತ್ತಿವೆ. ಇದರಿಂದಾಗಿ ಸೇತುವೆಯಿಲ್ಲದ ಹೊಳೆಗಳನ್ನು ದಾಟಲೂ ಜನ ಹರಸಾಹಸ ಪಡುವಂತಾಗಿದೆ. ಇದೇ ಭಾನುವಾರ ಭಮ್ರಗಡ ತಾಲೂಕಿನಲ್ಲಿ ತುಂಬು ಗರ್ಭಿಣಿಯೊಬ್ಬರನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆಯಿತು.
ಭಮ್ರಗಢ ತಾಲೂಕಿನ ಕುಚೇರ್ನ್ 9 ತಿಂಗಳ ಗರ್ಭಿಣಿ ಶೀಲಾ ಸದ್ಮೆಕ್ ಅವರ ಹೆರಿಗೆಗೆ ದಿನ ಸಮೀಪಿಸಿದ್ದು, ಭಮ್ರಗಢ ಗ್ರಾಮೀಣ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಪತಿಯೊಂದಿಗೆ ಆಸ್ಪತ್ರೆಗೆ ತೆರಳಲು ಮೋಟಾರ್ ಸೈಕಲ್ನಲ್ಲಿ ಹೊರಟಿದ್ದರು. ಆದರೆ ಇದೇ ವೇಳೆ ಮಳೆಯಿಂದಾಗಿ ಇರ್ಪನಾರ್ ಗ್ರಾಮದ ಬಳಿಯ ಹೊಳೆ ತುಂಬಿ ಹರಿಯುತ್ತಿತ್ತು. ಸೇತುವೆ ಇಲ್ಲದ ಆ ಹೊಳೆ ದಾಟುವುದು ಕಷ್ಟಸಾಧ್ಯವಾಗಿತ್ತು. ಅತ್ತ ಹೊಳೆಯನ್ನೂ ದಾಟಲಾಗದೆ, ಇತ್ತ ಆಸ್ಪತ್ರೆಗೂ ದಾಖಲಾಗದೆ ಬಾಕಿಯಾಗಿದ್ದ ಮಹಿಳೆಯ ಸಹಾಯಕ್ಕೆ ತಹಶೀಲ್ದಾರ್ ಧಾವಿಸಿದರು.
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಹೊಣೆ ಹೊತ್ತ ತಹಶೀಲ್ದಾರ್, ರಕ್ಷಣಾ ತಂಡದ ಜೊತೆಗೆ ಸ್ಥಳಕ್ಕೆ ತೆರಳಿ, ಮಹಿಳೆಯನ್ನು ಯಶಸ್ವಿಯಾಗಿ ಆಸ್ಪತ್ರೆ ಸೇರಿಸಿದರು.
ಈ ಬಗ್ಗೆ ಮಾತನಾಡಿದ ತಹಶೀಲ್ದಾರ್, "ಇರ್ಪನಾರ್ ಹಾಗೂ ಕುಚೇರ್ ಪ್ರದೇಶ ನಕ್ಸಲ್ ಹಾವಳಿ ಇರುವ ಪ್ರದೇಶವಾಗಿದ್ದು, ಎಸ್ಡಿಆರ್ಎಫ್ ಯೋಧರ ತಂಡವನ್ನು ಕರೆದುಕೊಂಡು ಹೋಗುವುದು ಅಪಾಯಕಾರಿಯಾಗಿತ್ತು. ಹಾಗಾಗಿ ನಗರ ಪಂಚಾಯತ್ನ ರಕ್ಷಣಾ ತಂಡದ ಮೂಲಕ ಎಚ್ಚರಿಕೆಯಿಂದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳ ಖಾಯಂ ಸ್ಥಳಾಂತರಕ್ಕೆ ಚರ್ಚಿಸಿ ತೀರ್ಮಾನ: ಸಿಎಂ - siddaramaiah