ಮನೆಯಲ್ಲಿ ಬಂಧಿಯಾಗಿದ್ದ ಚಿರತೆ ಸೆರೆ ಹಿಡಿಯುವ ವೇಳೆ ಪರಾರಿ.. ಆತಂಕ - ಮನೆಗೆ ನುಗ್ಗಿದ ಚಿರತೆ
Published : Jan 31, 2024, 11:04 PM IST
|Updated : Feb 1, 2024, 10:59 AM IST
ರೋಹ್ತಾಸ್(ಬಿಹಾರ): ಅರಣ್ಯದಿಂದ ಬಂದು ಮನೆಯೊಂದಕ್ಕೆ ನುಗ್ಗಿ ಬಂಧಿಯಾಗಿದ್ದ ಚಿರತೆಯೊಂದು, ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ರೋಹ್ತಾಸ್ ಜಿಲ್ಲೆಯ ಡೆಹ್ರಿ ಎಂಬ ಕಾಲೋನಿಯಲ್ಲಿ ನಡೆದಿದೆ.
ನಿನ್ನೆ ಸಂಜೆ ಇಲ್ಲಿಯ ನಿವೃತ್ತ ಶಿಕ್ಷರೊಬ್ಬರ ಮನೆಗೆ ಚಿರತೆ ನುಗ್ಗಿದೆ. ಚಿರತೆ ಕಂಡ ಕುಟುಂಬಸ್ಥರು ಬುದ್ಧಿವಂತಿಕೆ ಪ್ರದರ್ಶಿಸಿ ಚಿರತೆಯನ್ನು ಕೋಣೆಯಲ್ಲಿ ಬಂಧಿಸಿದ್ದಾರೆ. ಬಳಿಕ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ. ಆದರೂ ಚಿರತೆ ಅವರ ಕೈಗೆ ಸಿಗದೇ ತಪ್ಪಿಸಕೊಂಡು ಓಡಿಹೋಗಿದೆ.
ಕೋಣೆಯೊಂದರಲ್ಲಿ ಬಂಧಿಯಾಗಿದ್ದ ಚಿರತೆ ಅಲ್ಲಿಯೇ ಇದ್ದ ಶೌಚಾಲಯದ ವೆಂಟಿಲೇಟರ್ನಿಂದ ತಪ್ಪಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ಪರಾರಿಯಾಗಿರುವುದರಿಂದ ಸ್ಥಳೀಯರಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಚಿರತೆ ಸೆರೆಗಾಗಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಲ್ಲದೇ ಮಕ್ಕಳು ಮತ್ತು ವೃದ್ಧರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರಣ್ಯ ಅಧಿಕಾರಿಯೊಬ್ಬರು, ಹಲವು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಯಾವುದೇ ಯಶಸ್ಸು ಸಿಕ್ಕಿಲ್ಲ. ಅರಣ್ಯ ಇಲಾಖೆ ತಂಡ ಚಿರತೆಯನ್ನು ಪ್ರಜ್ಞಾಹೀನಗೊಳಿಸಲು ಯತ್ನಿಸಿದರೂ ಅದು ಸಾಧ್ಯವಾಗದ ಕಾರಣ ಚಿರತೆ ತಪ್ಪಿಸಿಕೊಂಡು ಪರಾರಿಯಾಗಿದೆ. ಮರಳಿ ಕಾಡಿಗೆ ಹೋಗಿರುವ ಅನುಮಾನವಿದೆ ಆದರೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಖಾಸಗಿ ಹೋಟೆಲ್ಗೆ ನುಗ್ಗಿದ ಚಿರತೆ.. ಅದೃಷ್ಟವಶಾತ್ ಪಾರಾದ ಸಿಬ್ಬಂದಿ: ವಿಡಿಯೋ