ಟ್ರ್ಯಾಕ್ಟರ್ನಲ್ಲಿ ಶಾಲೆಗೆ ಮೊದಲ ದಿನ ಮಕ್ಕಳ ಗ್ರ್ಯಾಂಡ್ ಎಂಟ್ರಿ - School Reopen - SCHOOL REOPEN
Published : May 31, 2024, 3:54 PM IST
ಬೆಳಗಾವಿ: ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಇಂದಿನಿಂದ ಶಾಲೆಗಳು ಪ್ರಾರಂಭವಾಗಿದ್ದು, ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಮಕ್ಕಳು ಶಾಲೆಗೆ ಆಗಮಿಸಿದ್ದು ವಿಶೇಷವಾಗಿತ್ತು. ರಜೆ ಕಳೆದು ಮಕ್ಕಳು ಶಾಲೆಯತ್ತ ಆಗಮಿಸುತ್ತಿದರಿಂದ ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶೃಂಗಾರಗೊಂಡ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಮಕ್ಕಳು ಶಾಲೆಗೆ ಬಂದರು. ಕೈಯಲ್ಲಿ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ಮಕ್ಕಳು ಪ್ರದರ್ಶಿಸಿದರು. ಅಲ್ಲದೇ ಶಾಲಾ ಪ್ರಾರಂಭೋತ್ಸವಕ್ಕಾಗಿ ಗ್ರಾಮಸ್ಥರು ಜಾನಪದ ಹಾಡು ರಚಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಡ್ರಮ್ ಬಾರಿಸುತ್ತಾ ಸಹಪಾಠಿಗಳೊಂದಿಗೆ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮೊದಲ ದಿನ ಮಕ್ಕಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಮಧ್ಯಾಹ್ನದ ಬಿಸಿಯೂಟಕ್ಕೆ ಜಿಲ್ಲೆಯ ಬಹುತೇಕ ಎಲ್ಲ ಶಾಲೆಗಳಲ್ಲಿ ಮಾವಿನಹಣ್ಣಿನ ಸಿಕರಣಿ, ಹೋಳಿಗೆ, ಸೀರಾ, ಪಾಯಸ, ಹುಗ್ಗಿ, ಅನ್ನ, ಸಾಂಬಾರ ಸೇರಿ ಮತ್ತಿತರ ತಿನಿಸುಗಳ ಊಟ ಸವಿದರು. ಇನ್ನು ಬೆಳಗಾವಿ ನಗರದ ಸರ್ದಾರ್ಸ್ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿದ ಶಿಕ್ಷಕರು ಅದ್ಧೂರಿಯಾಗಿ ಬರಮಾಡಿಕೊಂಡರು. ತಳಿರು ತೋರಣಗಳಿಂದ ಶಾಲೆಯನ್ನು ಶೃಂಗರಿಸಲಾಗಿತ್ತು. ಅಲ್ಲದೇ ಶಾಲೆ ಆವರಣದಲ್ಲಿ ರಂಗೋಲಿಯನ್ನು ಬಿಡಿಸಲಾಗಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಇಂದಿನಿಂದ ಶಾಲೆಗಳು ಪುನಾರಂಭ: ಮಕ್ಕಳಿಗೆ ಅದ್ಧೂರಿ ಸ್ವಾಗತ, ಮಧ್ಯಾಹ್ನ ಸಿಹಿಯೂಟ - Schools Reopen