ದಾವಣಗೆರೆ: ನಿಲ್ಲಿಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ - ಕಾರು ಸಂಪೂರ್ಣ ಸುಟ್ಟು ಕರಕಲು - fire broke out in parked baleno car
Published : Mar 18, 2024, 3:38 PM IST
ದಾವಣಗೆರೆ: ವಿಪರೀತ ತಾಪಮಾನ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು, ಕಾರು ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆ ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ನಡೆದಿದೆ. ಕಾರಿನಲ್ಲಿ ಯಾರು ಇಲ್ಲದ ವೇಳೆ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ನಾಗನಾಯ್ಕ ಎಂಬುವರು ಕಾರಿನ ಮಾಲೀಕ ಎಂದು ತಿಳಿದುಬಂದಿದೆ.
ನಾಗನಾಯ್ಕ ಅವರು ತಮ್ಮ ಕಾರು ನಿಲ್ಲಿಸಿ ಬಟ್ಟೆ ಖರೀದಿಗೆಂದು ವಿಶಾಲ್ ಮಾರ್ಟ್ಗೆ ತೆರಳಿದ್ದರು. ಮೊದಲಿಗೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಕಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಮಾಲೀಕರಾದ ನಾಗನಾಯ್ಕ ಅವರಿಗೆ ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ. ಹೊರಬಂದು ನೋಡುವಷ್ಟರಲ್ಲಿ ಇಡೀ ಕಾರಿಗೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಬಲೆನೊ ಕಾರು ಸುಟ್ಟು ಕರಕಲಾಗಿದೆ. ಇನ್ನು ಕಾರಿನಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ದಕ್ಷಿಣ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿಗೆ ಬೆಂಕಿ: ಯುವಕ ಸಜೀವ ದಹನ.. ಶೋಕ ಸಾಗರದಲ್ಲಿ ಪೋಷಕರು