ಕಾಡಾನೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ : ವಿಡಿಯೋ - Biker escaped from elephant - BIKER ESCAPED FROM ELEPHANT
Published : Apr 9, 2024, 7:52 PM IST
ಚಿಕ್ಕಮಗಳೂರು : ಕಳೆದ ಎರಡು ತಿಂಗಳ ಹಿಂದೆ ಚಾರ್ಮಾಡಿಯಲ್ಲಿ ಕಾಡಾನೆ ಕಾಣಿಸಿಕೊಂಡು ಪ್ರಯಾಣಿಕರಿಗೆ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದೆ. ಅಚ್ಚರಿ ಎಂದರೆ ತಿರುವಿನಲ್ಲಿ ರಸ್ತೆ ದಾಟಲು ಮುಂದಾಗಿದ್ದ ಆನೆಯನ್ನು ಕಾಣದೇ ಮುಂದೆ ಬಂದ ಬೈಕ್ ಸವಾರರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾರ್ಮಾಡಿಯ ಬಂಜಾರು ಮಲೆ ಕಡೆಯಿಂದ ಆಗಮಿಸಿದ ಕಾಡಾನೆ ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡು ಬಳಿಕ ಅಲ್ಲಿಂದ ತೆರಳಿತು. ರಸ್ತೆ ಬದಿ ಆನೆಯನ್ನು ಗಮನಿಸಿದ ವಾಹನ ಸವಾರರು ಆನೆ ದಾಟಿ ಹೋಗಲು ಅನುಕೂಲವಾಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆದರೆ, ಆನೆ ದಾಟುತ್ತಿರುವುದನ್ನು ಗಮನಿಸದೇ ಮುಂದೆ ಬಂದ ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಉಳಿದ ವಾಹನ ಸವಾರರು ಆನೆ ಇರುವುದರ ಬಗ್ಗೆ ಆತನ ಗಮನಕ್ಕೆ ತಂದರೂ ಅದನ್ನು ತಿಳಿಯದೇ ಸವಾರ ಸಂಚಾರ ನಡೆಸಿದ್ದಾರೆ. ಈ ದೃಶ್ಯವನ್ನು ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಕಲ್ಮಂಜದಲ್ಲಿ ದಾಂಧಲೆ ನಡೆಸಿದ ಆನೆ ಚಾರ್ಮಾಡಿ ಘಾಟಿಯಲ್ಲಿ ಪ್ರತ್ಯಕ್ಷವಾಗಿರುವ ಅನುಮಾನಗಳು ಮೂಡಿವೆ. ಪ್ರಸ್ತುತ ಕಾಡಿನ ಕೆರೆಗಳು, ನೇತ್ರಾವತಿ ನದಿ ಸಂಪೂರ್ಣ ಒಣಗಿದ್ದು, ಕೇವಲ ಮೃತ್ಯುಂಜಯ ನದಿಯಲ್ಲಿ ಮಾತ್ರ ನೀರು ಹರಿಯುತ್ತಿದೆ. ಈ ನದಿ ಹರಿಯುವ ನೆರಿಯ ಚಾರ್ಮಾಡಿಯ ಈ ಭಾಗದಲ್ಲಿ ಕಾಡಾನೆ ಆಶ್ರಯ ಪಡೆದಿರುವ ಸಾಧ್ಯತೆ ಇದೆ.
ಇದನ್ನೂ ಓದಿ : ಚಿಕ್ಕಮಗಳೂರು: ಹೆದ್ದಾರಿಯಲ್ಲಿ 'ಗಜ' ಸಂಚಾರ; ಆತಂಕ ಸೃಷ್ಟಿಸಿದ ಕಾಡಾನೆ - Wild Elephant