ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ರೂಮ್‌ಮೇಟ್‌ನನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿ. ನರಸೀಪುರ ಮೂಲದ ನಾಗರಾಜ್ (36) ಬಂಧಿತ ಆರೋಪಿ. ಡಿಸೆಂಬರ್ 26 ರಂದು ತನ್ನ ರೂಮ್‌ಮೇಟ್ ಶ್ರೀನಿವಾಸ್ (45) ಎಂಬಾತನಿಗೆ ವಾಟರ್ ಹೀಟರ್ ಕಾಯಿಲ್‌ನಿಂದ ಹೊಡೆದು ಹತ್ಯೆಗೈದು ನಾಗರಾಜ್ ಪರಾರಿಯಾಗಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ಟಿ. ನರಸೀಪುರ ಮೂಲದವರಾದ ಇಬ್ಬರೂ ಸಹ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ರೂಮ್ ಬಾಡಿಗೆಗೆ ಪಡೆದು ವಾಸವಿದ್ದರು. ಮೃತ ಶ್ರೀನಿವಾಸ್ ಮದುವೆಯಾಗಿ ಪತ್ನಿಯನ್ನು ತೊರೆದು ವಾಸವಾಗಿದ್ದ. ರೂಮ್‌ನಲ್ಲಿ ಶ್ರೀನಿವಾಸ್ ಸದಾ ನಾಗರಾಜ್‌ನ ಮೊಬೈಲ್ ತೆಗೆದುಕೊಂಡು ಕಾಲಕಳೆಯುತ್ತಿದ್ದನಂತೆ. ಅಲ್ಲದೇ ರೂಮ್‌ನ ಕೀಯನ್ನು ನಾಗರಾಜ್‌ಗೆ ಕೊಡುತ್ತಿರಲಿಲ್ಲವಂತೆ.
ಇದೇ ವಿಚಾರಕ್ಕೆ ಡಿಸೆಂಬರ್ 26ರಂದು ಮಧ್ಯಾಹ್ನ ರೂಮ್‌ನಲ್ಲಿದ್ದ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಸಿಟ್ಟಿಗೆದ್ದ ನಾಗರಾಜ್ ವಾಟರ್ ಹೀಟರ್ ಕಾಯಿಲ್‌ನಿಂದ ಶ್ರೀನಿವಾಸ್‌ಗೆ ಹೊಡೆದಿದ್ದ. ಆಂತರಿಕ ನೋವಿನಿಂದ ಬಳಲುತ್ತಲೇ ಶ್ರೀನಿವಾಸ್ ರಾತ್ರಿ ಮಲಗಿದ್ದ. ಬೆಳಿಗ್ಗೆ ಎದ್ದು ನೋಡಿದಾಗ ಶ್ರೀನಿವಾಸ್ ಸಾವನ್ನಪ್ಪಿದ್ದನ್ನು ಕಂಡ ನಾಗರಾಜ್ ಮನೆ ಬಿಟ್ಟು ತೆರಳಿದ್ದ. ಇಬ್ಬರೂ ಕೆಲಸಕ್ಕೆ ಬರದಿದ್ದಾಗ ರೂಮ್ ಮಳಿ ಮೇಸ್ತ್ರಿ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಿ.ಕೆ ಅಚ್ಚುಕಟ್ಟು ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಪರಾರಿಯಾಗಿದ್ದ ಆರೋಪಿ ನಾಗರಾಜ್‌ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ನಿರಾಕರಿಸಿದ ವ್ಯಕ್ತಿಯ ಕೊಲೆ, ಆರೋಪಿ ಬಂಧನ