ಬೆಳಗಾವಿ ಕಲಾವಿದನಿಂದ ರಂಗೋಲಿಯಲ್ಲಿ ಅರಳಿದ ಬಾಲರಾಮ: ವಿಡಿಯೋ - ಕಲಾವಿದ ಅಜಿತ್ ಔರವಾಡಕರ್
Published : Jan 21, 2024, 11:02 PM IST
ಬೆಳಗಾವಿ: ಅಯೋಧ್ಯೆಯಲ್ಲಿ ನಾಳೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದೆಡೆ, ಬೆಳಗಾವಿ ಕಲಾವಿದ ರಂಗೋಲಿಯಿಂದ ಬಿಡಿಸಿದ ಬಾಲರಾಮನ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈ ಮನಮೋಹಕ, ಸುಂದರ ಚಿತ್ರವನ್ನು ಬಿಡಿಸಿದವರು ಕಲಾವಿದ ಅಜಿತ್ ಔರವಾಡಕರ್.
ಒಂದೆಡೆ ರಾಮಮಂದಿರಕ್ಕೆ ವಾನರ ಸೇನೆ ಕಟ್ಟಿಕೊಂಡು ಬಾಲರಾಮ ಖುಷಿಯಿಂದ ಓಡುತ್ತಿದ್ದರೆ, ಮತ್ತೊಂದೆಡೆ ಎರಡು ಅಳಿಲುಗಳು ಎರಡೂ ಬದಿಯಲ್ಲಿ ನಿಂತು ಹೂವುಗಳನ್ನು ಎಸೆಯುವ ಮೂಲಕ ಅವರನ್ನು ಸ್ವಾಗತಿಸುತ್ತಿರುವ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸುತ್ತಿದೆ. ಬಿಲ್ಲು, ಬಾಣ ಹಿಡಿದು ನಿಜವಾಗಲೂ ಪುಟ್ಟ ರಾಮ ಓಡುತ್ತಿರುವಂತೆ ಭಾಸವಾಗುತ್ತಿದೆ. ಅಷ್ಟೊಂದು ನೈಜವಾಗಿ ಚಿತ್ರ ಮೂಡಿ ಬಂದಿದೆ. ರಂಗೋಲಿಯಲ್ಲಿ ಲೇಕ್ ಕಲರ್ ಮಿಶ್ರಣ ಮಾಡಿರುವ ಅಜಿತ್ ಅವರು, ಈ ಚಿತ್ರ ಬಿಡಿಸಲು ನಾಲ್ಕು ಕೆಜಿ ರಂಗೋಲಿ ಮತ್ತು ಲೇಕ್ ಕಲರ್ ಬಳಸಿದ್ದಾರೆ. ಅಲ್ಲದೇ ನಾಲ್ಕು ದಿನಗಳ ಕಾಲ ಇದಕ್ಕೆ ಶ್ರಮಿಸಿದ್ದಾರೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಕಲಾವಿದ ಅಜಿತ್ ಔರವಾಡಕರ್, ರಾಮಮಂದಿರ ಉದ್ಘಾಟನೆ ಆಗುತ್ತಿರುವುದಕ್ಕೆ ಇಡೀ ದೇಶವೇ ಖುಷಿ ಪಡುತ್ತಿದೆ. ನನ್ನ ಕಲೆಯ ಮೂಲಕ ಸೇವೆ ಸಲ್ಲಿಸುವ ಉದ್ದೇಶದಿಂದ ಈ ಚಿತ್ರ ಬಿಡಿಸಿದ್ದು, ಪ್ರದರ್ಶನಕ್ಕೆ ಇಡುತ್ತೇವೆ ಎಂದರು. ಅಜಿತ್ ಪುತ್ರಿ ಶ್ರದ್ಧಾ ಮಾತನಾಡಿ, ನಮ್ಮ ತಂದೆ ಕಲಾವಿದರು ಆಗಿದ್ದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ. ತಂದೆಯವರು ಬಿಡಿಸಿದ ಚಿತ್ರಗಳನ್ನು ವೀಕ್ಷಿಸಲು ಸಾಕಷ್ಟು ಜನರು ಬರುತ್ತಾರೆ. ಎಲ್ಲರೂ ಚಿತ್ರ ನೋಡಿ ಸಂತಸ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
ಕಳೆದ 13 ವರ್ಷಗಳಿಂದ ರಂಗೋಲಿಯಲ್ಲಿ ಚಿತ್ರ ಬಿಡಿಸುತ್ತಿರುವ ಅಜಿತ್ ಔರವಾಡಕರ್ ಅವರು, ಪಂಢರಪುರ ವಿಠ್ಠಲ ದೇವರು, ಶಿವಾಜಿ ಮಹಾರಾಜ, ಶಾಹು ಮಹಾರಾಜ, ಸಿದ್ದೇಶ್ವರ ಸ್ವಾಮೀಜಿ, ಡಾ. ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ಅಮಿತಾಬ್ ಬಚ್ಚನ್ ಅವರ ಚಿತ್ರ ಸೇರಿ 200ಕ್ಕೂ ಅಧಿಕ ಚಿತ್ರಗಳನ್ನು ಬಿಡಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ವಿಶ್ವ ಹಿಂದೂ ಪರಿಷತ್ ಗೋಶಾಲೆಯಲ್ಲಿ ಹಣತೆ ತಯಾರಿಕೆ