ಮಂಗಳೂರು: ಪಕ್ಕದ ಮನೆಗೆ ಬಂದ ಹೆಬ್ಬಾವು ಹಿಡಿಯುವ ಧೈರ್ಯ ತೋರಿದ ಮಹಿಳೆ - VIDEO - Woman Catches Python - WOMAN CATCHES PYTHON
Published : Aug 10, 2024, 10:15 PM IST
ಮಂಗಳೂರು: ನಗರದ ಡೊಂಗರಕೇರಿಯಲ್ಲಿರುವ ಮನೆಯೊಂದಕ್ಕೆ ಬಂದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಪಕ್ಕದ ಮನೆಯ ಮಹಿಳೆಯೊಬ್ಬರು ಹಿಡಿಯುವ ಮೂಲಕ ಧೈರ್ಯ ತೋರಿದ ವಿಡಿಯೋ ವೈರಲ್ ಆಗಿದೆ.
ಡೊಂಗರಕೇರಿಯ ಬಾಲಕೃಷ್ಣ ನಾಯಕ್ ಎಂಬವರ ಮನೆಯಲ್ಲಿರುವ ಹಳೆಯ ಹಟ್ಟಿಯಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಹೆಬ್ಬಾವು ಪತ್ತೆಯಾಗಿತ್ತು. ಇದು 9 ರಿಂದ 10 ಅಡಿ ಉದ್ದದ ಹೆಬ್ಬಾವು. ಬಾಲಕೃಷ್ಣ ನಾಯಕ್ ಅವರ ಮನೆಯಲ್ಲಿ ಹೆಬ್ಬಾವು ಕಂಡುಬಂದ ಮಾಹಿತಿ ಅರಿತು ಬಂದ ಪಕ್ಕದ ನಿವಾಸಿ ಲಕ್ಷ್ಮೀ ಕಾಮತ್ ಅವರು ಧೈರ್ಯದಿಂದ ಹಾವಿನ ಬಾಲ ಹಿಡಿದು ರಸ್ತೆಗೆ ತಂದಿದ್ದಾರೆ. ಆ ಬಳಿಕ ಆದಿತ್ಯ ಎಂಬ ಉರಗ ರಕ್ಷಕ ಬಂದು ಹೆಬ್ಬಾವು ಹಿಡಿದು ಪಚ್ಚನಾಡಿ ಬಳಿಯ ಮಂಜಲ್ಪಾದೆಯಲ್ಲಿ ಬಿಟ್ಟಿದ್ದಾರೆ.
ಬಾಲಕೃಷ್ಣ ನಾಯಕ್ ಅವರ ಮನೆಯ ಬಳಿಗೆ ಕಳೆದ ಮೂರು ವರ್ಷಗಳಿಂದ ಆಗಾಗ ಹೆಬ್ಬಾವುಗಳು ಬರುವುದು ಸಾಮಾನ್ಯ. ಆಗ ಉರಗ ರಕ್ಷಕರನ್ನು ಕರೆಸಿ ಹಿಡಿಸುತ್ತಿದ್ದರು. ಆದರೆ ಈ ಬಾರಿ ಲಕ್ಷ್ಮೀ ಕಾಮತ್ ಅವರು ಹೆಬ್ಬಾವನ್ನು ಹಿಡಿದು ಸಾಹಸ ಮೆರೆದಿದ್ದಾರೆ. ಸದ್ಯ ಲಕ್ಷ್ಮೀ ಕಾಮತ್ ಅವರು ಹೆಬ್ಬಾವಿನ ಬಾಲ ಹಿಡಿದು ನಿಯಂತ್ರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.