ಮಂಡ್ಯ: ಬತ್ತಿದ ಕೆರೆಕಟ್ಟೆ, ಬೋರ್ವೆಲ್, ಜಾನುವಾರುಗಳಿಗೆ ನೀರಿಲ್ಲದೆ ಪರದಾಟ
Published : Mar 11, 2024, 7:09 PM IST
ಮಂಡ್ಯ : ಎಲ್ಲಿ ನೋಡಿದರೂ ಭೀಕರ ಬರಗಾಲ. ಮಳೆ ಇಲ್ಲದೇ ಈಗಾಗಲೇ ಅಣೆಕಟ್ಟೆಗಳು ಬರಿದಾಗಿವೆ. ಇದರಿಂದಾಗಿ ಕೆರೆ, ಕಟ್ಟೆಗಳು ಒಣಗಿದ್ದು, ಬೋರ್ ವೆಲ್ಗಳು ಬತ್ತಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದೆ ಪರಿತಪಿಸುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಮಂಡ್ಯದಲ್ಲಿದೆ.
ಹೌದು ಅಕ್ಷರಶಃ ಮಂಡ್ಯ ಜಿಲ್ಲೆ ಬರದಿಂದ ತತ್ತರಿಸಿದೆ. ಇತ್ತ ಕೆಆರ್ಎಸ್ ಅಣೆಕಟ್ಟೆ ಬರಿದಾಗಿದ್ದು, ನಾಲೆಗಳಲ್ಲಿ ನೀರು ಹರಿಸಲಾಗುತ್ತಿಲ್ಲ. ಇದರಿಂದಾಗಿ ಕೆರೆ, ಕಟ್ಟೆಗಳು ಒಣಗಿ ನಿಂತಿವೆ. ಇನ್ನು ಬೆಳೆಗಳ ಪರಿಸ್ಥಿತಿಯಂತೂ ಕೇಳೋ ಹಾಗೆ ಇಲ್ಲ. ಜಾನುವಾರುಗಳು ನೀರಿಲ್ಲದೇ ಪರದಾಡೋ ಪರಿಸ್ಥಿತಿ ಬಂದೊದಗಿದೆ. ಮಂಡ್ಯ ತಾಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ನೀರಿನ ಹಾಹಾಕಾರ ಎದುರಾಗಿದೆ. ಮನೆಗೆ ಕುಡಿಯಲು ಸರಬರಾಜಾಗೋ ನೀರನ್ನೇ ಜಮೀನು ಬಳಿ ಕೊಂಡೊಯ್ದು ಜಾನುವಾರುಗಳಿಗೆ ಕುರಿ, ಮೇಕೆಗಳಿಗೆ ಕುಡಿಯಲು ಬಳಸಲಾಗುತ್ತಿದೆ.
ಕಳೆದೆರಡು ದಿನಗಳಿಂದ ಕೆಆರ್ಎಸ್ನಿಂದ ಬೆಂಗಳೂರಿಗೆ ಕುಡಿಯಲು ನೀರು ಬಿಡಲಾಗುತ್ತಿದೆ. ಆದರೆ, ನಾಲೆಗಳಿಗೆ ಮಾತ್ರ ನೀರು ಹರಿಸುತ್ತಿಲ್ಲ. ಇದರಿಂದಾಗಿ ರೈತರು ಕೂಡ ಸಿಡಿದೆದ್ದಿದ್ದಾರೆ. ಒಂದು ಬಾರಿಯಾದರೂ ನಾಲೆಯಲ್ಲಿ ನೀರು ಹರಿಸಿದರೆ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಬಹುದು. ಇದರಿಂದಾಗಿ ಅಂತರ್ಜಲವೂ ಹೆಚ್ಚುತ್ತದೆ. ಸರ್ಕಾರಕ್ಕೆ ಬೆಂಗಳೂರಿಗರ ಮೇಲೆ ಇರುವ ಪ್ರೀತಿ ಮಂಡ್ಯ ಜಿಲ್ಲೆಯ ಜನರ ಮೇಲಿಲ್ಲ. ಕೂಡಲೇ ನಾಲೆಗಳಲ್ಲಿ ನೀರು ಹರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತೆ ಅಂತ ಎಚ್ಚರಿಸಿದ್ದಾರೆ.
''ಈಗ ನಮ್ಮ ಬದುಕನ್ನ ಡೋಲಾಯಮಾನ ಮಾಡಿರುವುದು ಇದೆ. ನಮಗೆ ವೈಜ್ಞಾನಿಕವಾದ ಪರಿಹಾರವನ್ನು ಕೊಡಬೇಕು. ಕುಡಿಯುವ ನೀರಿಗೆ ಅನುಕೂಲವಾಗುವಂತಹ ಕಾಲುವೆಗೆ ನೀರು ಹರಿಸುವಂತಹ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನ ಸರಿಯಾದ ಉತ್ತರ ಕೊಡುತ್ತಾರೆ'' ಎಂದು ರೈತ ನಾಯಕ ನಂಜುಂಡೇಗೌಡ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ: ಡಿಸಿಗಳಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆ