ಚಿಕ್ಕಮಗಳೂರು: ಮನೆ ಬಾಗಿಲಿಗೆ ಬಂದ ಭಾರಿ ಗಾತ್ರದ ಮೊಸಳೆ, ಬೆಚ್ಚಿಬಿದ್ದ ಕುಟುಂಬಸ್ಥರು - Crocodile Found
Published : Mar 23, 2024, 9:32 AM IST
|Updated : Mar 23, 2024, 9:53 AM IST
ಚಿಕ್ಕಮಗಳೂರು: ಮಲೆನಾಡು ಭಾಗದ ಜನರು ಒಂದಲ್ಲ ಒಂದು ಸಮಸ್ಯೆಯಲ್ಲಿ ಬದುಕುವಂತಾಗಿದೆ. ಪ್ರಮುಖವಾಗಿ ಕಾಡು ಪ್ರಾಣಿಗಳ ಕಾಟವೇ ಈ ಭಾಗದ ಜನರ ನಿದ್ದೆಗೆಡಿಸಿದ್ದು ಪ್ರತಿನಿತ್ಯ ಕಾಡಾನೆ ಅಥವಾ ಕಾಡೆಮ್ಮೆ, ಹುಲಿ, ಚಿರತೆಗಳು ಸೇರಿದಂತೆ ಕಾಡು ಪ್ರಾಣಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಇದೀಗ ಮೊಸಳೆಯ ಕಾಟ ಶುರುವಾಗಿದೆ. ಇಲ್ಲಿಯ ಬಾಳೆ ಹೊನ್ನೂರಿನಲ್ಲಿರುವ ಭದ್ರಾ ನದಿಯಿಂದ ನೇರವಾಗಿ ಮನೆಯ ಬಳಿಗೆ ಭಾರಿ ಗಾತ್ರದ ಮೊಸಳೆ ಬಂದಿದ್ದು, ಎನ್ ಆರ್ ಪುರ ತಾಲೂಕಿನ ಖಾಂಡ್ಯ ಬಳಿಯ ಹೆಮ್ಮಕ್ಕಿಯ ನಾಗೇಶ್ ಗೌಡ ಮನೆಯ ಮುಂದೆ ಮೊಸಳೆ ಪ್ರತ್ಯಕ್ಷವಾಗಿದೆ.
ಉಜ್ಜಿನಿ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಇರುವ ಮನೆಯ ಬಳಿ ಮೊಸಳೆ ಬಂದಿದ್ದು, ಮೊಸಳೆ ಕಂಡು ಕುಟುಂಬಸ್ಥರು ಬಿಚ್ಚಿಬಿದ್ದಿದ್ದಾರೆ. ಕೂಡಲೇ ಮನೆಯ ಸದಸ್ಯರು ಅಕ್ಕ ಪಕ್ಕದವರ ಸಹಾಯದಿಂದ ಭಾರಿ ಗಾತ್ರದ ಮೊಸಳೆ ಸೆರೆ ಹಿಡಿದಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಮೊಸಳೆ ಹೊರ ಬಂದಿದೆ ಎನ್ನಲಾಗಿದೆ. ಸೆರೆ ಹಿಡಿದ ಮೊಸಳೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ಕಾಳಿಂಗ ಸರ್ಪ - King Cobra Escapes