18ನೇ ಲೋಕಸಭೆ ಅಧಿವೇಶನ: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜೋಶಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸೋಮಣ್ಣ! - 18th Lok Sabha Session - 18TH LOK SABHA SESSION
Published : Jun 24, 2024, 2:25 PM IST
ನವದೆಹಲಿ: 18ನೇ ಲೋಕಸಭೆಯ ಅಧಿವೇಶನವು ಸೋಮವಾರ ಹೊಸ ಸಂಸದರ ಪ್ರಮಾಣ ವಚನ ಸ್ವೀಕಾರದೊಂದಿಗೆ ಪ್ರಾರಂಭವಾಯಿತು. ಪದ್ಧತಿಯಂತೆ ಎಲ್ಲಾ ನೂತನ ಸದಸ್ಯರು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವರು ಹಿಂದಿಯಲ್ಲಿ, ಇನ್ನು ಕೆಲವರು ಇಂಗ್ಲೀಷ್ನಲ್ಲಿ, ಇನ್ನು ಕೆಲವು ಸಂಸದರು ಆಯಾ ರಾಜ್ಯದ ಆಡಳಿತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ನಿತ್ಯಾನಂದ ರೈ, ಸಿ.ಆರ್.ಪಾಟೀಲ್, ಡಾ. ಜಿತೇಂದ್ರ ಸಿಂಗ್, ಜಿ. ಕಿಶನ್ ರೆಡ್ಡಿ ಮತ್ತು ಚಿರಾಗ್ ಪಾಸ್ವಾನ್, ಕಿರಣ್ ರಿಜಿಜು, ಮನ್ಸುಖ್ ಮಾಂಡವಿಯಾ. ಜಿತನ್ ರಾಮ್ ಮಾಂಝಿ, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಜ್ಯೋತಿರಾದಿತ್ಯ ಸಿಂಧಿಯಾ, ಗಿರಿರಾಜ್ ಸಿಂಗ್, ಸರ್ಬಾನಂದ ಸೋನೋವಾಲ್, ರಾಮ್ ಮೋಹನ್ ನಾಯ್ಡು ಕಿಂಜರಾಪು, ರಾಜೀವ್ ರಂಜನ್ ಅವರು ಸೇರಿದಂತೆ ಹಲವು ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಮೊದಲನೇ ದಿನವೇ 280 ಸಂಸದರು ಪ್ರಮಾಣವಚನವನ್ನು ಸ್ವೀಕರಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಎರಡನೇ ದಿನವಾದ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉಳಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವರು.
ಇದಕ್ಕೂ ಮುನ್ನ ಏಳು ಬಾರಿ ಸಂಸದರಾಗಿ ಆಯ್ಕೆಯಾದ ಭರ್ತೃಹರಿ ಮಹತಾಬ್ ಅವರು 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.