ಬೆಂಗಳೂರು: ಮಾಹಿತಿ ತಂತ್ರಜ್ಞಾನ ದಿಗ್ಗಜ ವಿಪ್ರೋ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಆರಂಭಿಸಿರುವ ಲಾಭರಹಿತ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಬ್ರೈನ್ ರಿಸರ್ಚ್ (ಸಿಬಿಆರ್) ಸಂಸ್ಥೆಗಳು ಸಂಶೋಧನಾ ಸಹಭಾಗಿತ್ವದ ಒಡಂಬಡಿಕೆ ಮಾಡಿಕೊಂಡಿವೆ. ವೈಯಕ್ತಿಕಗೊಳಿಸಿದ ಎಐ ಆಧಾರಿತ ಆರೋಗ್ಯ ಸಂಬಂಧಿತ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಸಹಭಾಗಿತ್ವವು ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂಎಲ್) ಮತ್ತು ಬಿಗ್ ಡೇಟಾ ವಿಶ್ಲೇಷಣೆಯ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳಲಿದೆ ಮತ್ತು ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಅಗತ್ಯವಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಿದೆ.
ವಿಪ್ರೋದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ &ಡಿ) ತಂಡವು ಎಐ ಆಧರಿತ ವೈಯಕ್ತಿಕ ಆರೈಕೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಿದೆ. ಈ ವೈಯಕ್ತಿಕ ಆರೈಕೆ ವ್ಯವಸ್ಥೆಯು ವ್ಯಕ್ತಿಯ ಆರೋಗ್ಯ ಇತಿಹಾಸ, ಅಪೇಕ್ಷಿತ ಆರೋಗ್ಯ ಸ್ಥಿತಿ ಮತ್ತು ಇತರ ನಡವಳಿಕೆಯ ಪ್ರತಿಕ್ರಿಯೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.
ಇದು ವೃದ್ಧಾಪ್ಯದಲ್ಲಿಯೂ ಆರೋಗ್ಯದಿಂದಿರಲು, ಸಕಾರಾತ್ಮಕ ರೀತಿಯಲ್ಲಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಮತ್ತು ಮಾನಸಿಕ-ಸಾಮಾಜಿಕ ಯೋಗಕ್ಷೇಮಗಳ ಉತ್ತೇಜನಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಎಐ ತಂತ್ರಜ್ಞಾನದ ಮೂಲಕ ಹೃದಯರಕ್ತನಾಳದ ಕಾಯಿಲೆ ಮತ್ತು ಸಂಬಂಧಿತ ನ್ಯೂರೋಡಿಜೆನರೇಟಿವ್ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಪ್ರಯತ್ನಿಸುತ್ತದೆ.