ನ್ಯೂಯಾರ್ಕ್, ಅಮೆರಿಕ:ಸುನೀತಾ ವಿಲಿಯಮ್ಸ್ ಮತ್ತು ಇತರ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಕ್ರಿಸ್ಮಸ್ ಆಚರಿಸಿ ಸಂತಸಪಟ್ಟರು. ಸುನೀತಾ ವಿಲಿಯಮ್ಸ್ ಸೇರಿದಂತೆ ಇತರ ಗಗನಯಾತ್ರಿಗಳು ಕ್ರಿಸ್ಮಸ್ ಸಂದೇಶಗಳನ್ನು ನೀಡಿದರು. ಈ ಬಗ್ಗೆ ನಾಸಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.
ಈ ವರ್ಷದ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಅಲ್ಲಿ ಸಿಲುಕಿಕೊಂಡಿದ್ದಾರೆ. ಮುಂದಿನ ವರ್ಷ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಅವರು ಭೂಮಿಗೆ ತಲುಪುವ ಸಾಧ್ಯತೆ ಇದೆ ಎಂದು ನಾಸಾ ಇತ್ತೀಚೆಗೆ ಬಹಿರಂಗಪಡಿಸಿದೆ.
ಸುನೀತಾ ಮತ್ತು ವಿಲ್ಮೋರ್ 8 ದಿನಗಳ ಕಾರ್ಯಾಚರಣೆಯ ಭಾಗವಾಗಿ ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ ನಲ್ಲಿ ಜೂನ್ 6 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ವಾಸ್ತವವಾಗಿ ಇಬ್ಬರೂ ಜೂನ್ 14 ರಂದು ಭೂಮಿಗೆ ಮರಳಬೇಕಿತ್ತು. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳಿಂದ ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಭೂಮಿಗೆ ಕರೆ ತರುವ ಪ್ರಯತ್ನಗಳು ಮುಂದುವರೆದಿವೆ.
ಮಾರ್ಚ್‌ಗೂ ಮುನ್ನ ಭೂಮಿಗೆ ಮರಳುತ್ತಾರಾ? :ಇಬ್ಬರನ್ನು ವಾಪಸ್ ಭೂಮಿಗೆ ಕರೆತರಲು SpaceX ಕ್ರೂ-9 ಎಂಬ ಮಿಷನ್ ಪ್ರಾರಂಭಿಸಿತು. ಇದರಲ್ಲೂ ಹಾಗ್ ಮತ್ತು ಗೋರ್ಬುನೋವ್ ಎಂಬ ಇಬ್ಬರು ಗಗನಯಾತ್ರಿಗಳಿದ್ದರು. ಇದೇ ವೇಳೆ, ಬಾಹ್ಯಾಕಾಶದಲ್ಲಿ ಸಿಲುಕಿದವರನ್ನು ಭೂಮಿಗೆ ಕರೆತರಲು ಇವರ ಜತೆ ಎರಡು ಆಸನಗಳನ್ನು ಖಾಲಿ ಕಳುಹಿಸಲಾಗಿದೆ. ಅದು ಸೆಪ್ಟೆಂಬರ್‌ನಲ್ಲಿಯೇ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ನಾಲ್ವರೂ ಫೆಬ್ರವರಿಯಲ್ಲಿ ಹಿಂತಿರುಗುತ್ತಾರೆ ಎಂದು ನಾಸಾ ಆರಂಭದಲ್ಲಿ ಘೋಷಿಸಿತ್ತು. ಆದಾಗ್ಯೂ, ಕ್ರ್ಯೂ -9 ರ ಸಿಬ್ಬಂದಿಯನ್ನು ಭೂಮಿಗೆ ಮರಳಿ ತರಲು ಕ್ರ್ಯೂ -10 ಉಡಾವಣೆ ಮಾರ್ಚ್‌ಗಿಂತ ಮೊದಲು ಸಂಭವಿಸುವ ಸಾಧ್ಯತೆಗಳಿಲ್ಲಎಂದು ತಿಳಿದು ಬಂದಿದೆ.