BSNL Direct to Device Service: ಕಳೆದ ದಶಕದಲ್ಲಿ ವೈರ್‌ಲೆಸ್ ನೆಟ್‌ವರ್ಕಿಂಗ್ ಮತ್ತು ಸಂಪರ್ಕವು ತೀವ್ರವಾಗಿ ಸುಧಾರಿಸಿದೆ. ಆದ್ರೂ ಸಹ ಇದು ಇನ್ನೂ ಸಂಪೂರ್ಣವಾಗಿಲ್ಲ. ಭಾರತದಲ್ಲಿ ಅನೇಕ ದೂರಸ್ಥ ಮತ್ತು ಸೇವೆ ತಲುಪದ ಸ್ಥಳಗಳಿವೆ. ಅಂತಹ ಸ್ಥಳಗಳಲ್ಲಿ ಸೆಲ್ಯುಲಾರ್ ಟವರ್ ಅನ್ನು ಸ್ಥಾಪಿಸುವುದು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್), ಅಮೆರಿಕ ಮೂಲದ ಉಪಗ್ರಹ ಸಂವಹನ ಕಂಪನಿಯಾದ Viasat ಸಹಭಾಗಿತ್ವದಲ್ಲಿ ಪರಿಹಾರವೊಂದನ್ನು ಕಂಡುಕೊಂಡಿದೆ. ಈ ಸಾಧನದಿಂದ ನೇರವಾಗಿ ಉಪಗ್ರಹ ಸಂಪರ್ಕ ಸೇವೆ ನೀಡಬಹುದಾಗಿದೆ. ಇದು ದೇಶದ ಮೂಲೆ ಮೂಲೆಗಳಲ್ಲಿ ಸೆಲ್ಯುಲರ್ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಿಎಸ್ಎನ್ಎಲ್ ಹೇಳಿಕೊಂಡಿದೆ.
ಡೈರೆಕ್ಟ್ ಟು ಡಿವೈಸ್ ಉಪಗ್ರಹ ಸಂಪರ್ಕವು ಹೊಚ್ಚಹೊಸ ತಂತ್ರಜ್ಞಾನವಲ್ಲ. ಆಪಲ್ ಮತ್ತು ಗೂಗಲ್‌ನಂತಹ ಫೋನ್ ತಯಾರಕರು ಸ್ವಲ್ಪ ಸಮಯದವರೆಗೆ ಅಂತಹ ಸೇವೆಗಳನ್ನು ನೀಡುತ್ತಿದ್ದಾರೆ. ಆದರೆ ಇವುಗಳ ಸೇವೆ ಭಾರತದಲ್ಲಿ ಅಲ್ಲ. ಭಾರತದಲ್ಲಿ ಡೈರೆಕ್ಟ್ ಸ್ಯಾಟಲೈಟ್ ಕನೆಕ್ಟಿವಿಟಿ ಸರ್ವೀಸ್ ಅನ್ನು ಪ್ರಾರಂಭಿಸಿದ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ಬಿಎಸ್ಎನ್ಎಲ್ ಆಗಲಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರ ಇಲ್ಲಿದೆ.
ಬಿಎಸ್ಎನ್ಎಲ್ನ ಡೈರೆಕ್ಟ್-ಟು-ಡಿವೈಸ್ ಉಪಗ್ರಹ ಸಂಪರ್ಕಕ್ಕೆ ಮೂರು ಮುಖ್ಯ ಅಂಶಗಳ ಅಗತ್ಯವಿದೆ. ಉಪಗ್ರಹ ಸಂಪರ್ಕಕ್ಕೆ ಸಪೋರ್ಟ್ ಹೊಂದಿರುವ ಸ್ಮಾರ್ಟ್‌ಫೋನ್, ಸ್ಯಾಟಲೈಟ್ ಮತ್ತು ಸೆಲ್ಯುಲಾರ್ ಟವರ್. ದುರ್ಬಲ ಸಿಗ್ನಲ್‌ನಿಂದಾಗಿ ಫೋನ್ನ ಸಮೀಪದ ಸೆಲ್ಯುಲಾರ್ ಟವರ್ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ಸ್ಮಾರ್ಟ್‌ಫೋನ್ ನಂತರ ಸ್ಯಾಟಲೈಟ್ಗೆ ಸಂಪರ್ಕಗೊಳ್ಳುತ್ತದೆ. ಸ್ಯಾಟಲೈಟ್ ನಂತರ ಅದೇ ಸಂಕೇತವನ್ನು ಹತ್ತಿರದ ಟವರ್‌ಗೆ ಕಳುಹಿಸುವ ಮೂಲಕ ಸಂಪರ್ಕವನ್ನು ಪೂರ್ಣಗೊಳಿಸುತ್ತದೆ.
ಬಿಎಸ್ಎನ್ಎಲ್ ನಡೆಸಿದ ಪ್ರಯೋಗಗಳ ಪ್ರಕಾರ ಭೂಮಿಯಿಂದ 36,000 ಕಿ.ಮೀ. ದೂರದಲ್ಲಿರುವ ಭೂಸ್ಥಿರ ಎಲ್-ಬ್ಯಾಂಡ್ ಉಪಗ್ರಹದ ಮೂಲಕ ಟೆಕ್ಸ್ಟ್ ಮೆಸೇಜ್ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿದೆ.