ಉಡುಪಿ: ಸಾಂಸ್ಕೃತಿಕ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸದಾ ಸಾಧನೆ ಮಾಡುತ್ತಿರುವ ಉಡುಪಿಯ ಜನರು ಇದೀಗ ವಿಜ್ಞಾನ ಕ್ಷೇತ್ರದಲ್ಲೂ ಸಹ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಉಡುಪಿಯ ಪರ್ಕಳ ಮೂಲದ ವಿಜ್ಞಾನಿಯೊಬ್ಬರು ನಿರ್ಮಿಸಿದ ದೂರದರ್ಶಕ ಇಂದು ವಿಶ್ವ ದಾಖಲೆ ಮಟ್ಟಕ್ಕೆ ತಲುಪಿದೆ.
ಉಡುಪಿ ವಿಜ್ಞಾನಿ ವಿ ಮನೋಹರ್ ಅವರು ಶಕ್ತಿಯುತ ದೂರದರ್ಶಕವೊಂದನ್ನು ನಿರ್ಮಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ವಿ ಮನೋಹರ್ ಕಳೆದ ಹಲವಾರು ವರ್ಷಗಳಿಂದ ದೂರದರ್ಶಕ ಮತ್ತು ಇದಕ್ಕೆ ಸಂಬಂಧಿಸಿದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಉನ್ನತ ಮಟ್ಟದ ಕೆಲಸವನ್ನು ಕೂಡಾ ಮಾಡಿದ್ದಾರೆ. ಈ ಹಿಂದೆ ಸೂರ್ಯಗ್ರಹಣ, ಚಂದ್ರಗ್ರಹಣ ಮುಂತಾದ ಸಂದರ್ಭಗಳಲ್ಲಿ ಸ್ಥಳೀಯ ಉತ್ಸಾಹಿ ಜನರ ಜೊತೆಗೂಡಿ ದೂರದರ್ಶಕದ ಮೂಲಕ ಗ್ರಹಣ ವೀಕ್ಷಣೆಗೂ ಕೂಡಾ ಅವಕಾಶ ಕಲ್ಪಿಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರೆದು ಎರಡೂ ಕಣ್ಣುಗಳ ಮೂಲಕ ಆಕಾಶವನ್ನು ಗ್ರಹಿಸುವ ಪ್ರಪಂಚದಲ್ಲಿಯೇ ವಿಶಿಷ್ಟ ದೂರದರ್ಶಕವನ್ನು ತಮ್ಮ ಕೈಚಳಕದಿಂದ ನಿರ್ಮಿಸಿ ಇದನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
10 ಕಿ.ಮೀ.ವರೆಗಿನ ವಸ್ತುವನ್ನು ವೀಕ್ಷಿಸುವ ದೂರದರ್ಶಕ:ಈ ದೂರದರ್ಶಕದ ಮುಖೇನವಾಗಿ 200 ರಿಂದ 240 ಎಕ್ಸ್ ಎಂದರೆ ಸುಮಾರು 10 ಕಿಲೋ ಮೀಟರ್ ದೂರದವರೆಗಿನ ವಸ್ತುಗಳನ್ನು ಎರಡೂ ಕಣ್ಣುಗಳಿಂದ ಸ್ವಷ್ಟವಾಗಿ ನೋಡಿ ಗುರುತಿಸಬಹುದು. ಈ ದೂರದರ್ಶಕಕ್ಕೆ ವಿ ಮನೋಹರ್ ಅವರಿಗೆ ಈಗಾಗಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಲಂಡನ್ ಮತ್ತು ಇಂಡಿಯನ್ ಗ್ಲೋರಿ ಅವಾರ್ಡ್ಸ್ 2024 ಲಭಿಸಿದೆ. ಈಗಾಗಲೇ ಗಿನ್ನೆಸ್ ರೆಕಾರ್ಡ್ಗೆ ಕೂಡಾ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಇದು ಲಭಿಸುವ ಸಾಧ್ಯತೆ ಕೂಡಾ ಇದೆ. ಎರಡೂ ಕಣ್ಣುಗಳಲ್ಲಿ ನೋಡುವುದರಿಂದಾಗಿ ವೀಕ್ಷಕರಿಗೆ ಕಣ್ಣಿನ ಮೇಲೆ ಹೆಚ್ಚು ಒತ್ತಡ ಹಾಕದೇ ಸುಲಭವಾಗಿ ದೂರದರ್ಶಕದ ಮೂಲಕವಾಗಿ ದೂರದ ವಸ್ತುಗಳನ್ನು ವೀಕ್ಷಿಸಬಹುದಾಗಿದೆ.