ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಂವಹನ ಆಧಾರಿತ ಉಪಗ್ರಹವಾದ ಜಿಸ್ಯಾಟ್-ಎನ್2 ಅನ್ನು ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ನ 'ಫಾಲ್ಕನ್-'9 ವ್ಯೋಮನೌಕೆಯು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿದೆ.
ಅಮೆರಿಕದ ಕೇಪ್ ಕೆನವೆಎಲ್ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದ್ದ GSAT-N2 ಉಪಗ್ರಹವು ಸ್ಪೇಸ್ ಎಕ್ಸ್ನ ರಾಕೆಟ್ನ ಸಹಾಯದಿಂದ ನಿಗದಿತ ಕಕ್ಷೆಗೆ ಸೇರಿದೆ ಎಂದು ಇಸ್ರೋದ ವಾಣಿಜ್ಯ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಮಂಗಳವಾರ ತಿಳಿಸಿದೆ.
4.7 ಟನ್ ತೂಕವಿದ್ದ ಈ ಜಿಎಸ್ಎಟಿ-ಎನ್2 ಹೈ-ಥ್ರೂಪುಟ್ (ಎಚ್ಟಿಎಸ್) ಉಪಗ್ರಹವು ಸೇರಬೇಕಿದ್ದ ಜಿಯೋ - ಸಿಂಕ್ರೋನಸ್ ಟ್ರಾನ್ಸ್ಫರ್ ಕಕ್ಷೆಯನ್ನು ಯಶಸ್ವಿಯಾಗಿ ಮುಟ್ಟಿದೆ. ತನ್ನ ಪಥದಲ್ಲಿ ಅದು ಪರಿಭ್ರಮಣೆ ನಡೆಸುತ್ತಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ. ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಅದರ ನಿಯಂತ್ರಣ ಸಾಧಿಸಿದೆ ಎಂದು ಎನ್ಎಸ್ಐಎಲ್ ತನ್ನ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ಉಪಗ್ರಹದ ಉದ್ದೇಶವೇನು?:ಬಾಹ್ಯಾಕಾಶ ಸೇರಿರುವ ಜಿಎಸ್ಎಟಿ-ಎನ್2 ಉಪಗ್ರಹವು ದೇಶದ ಬ್ರಾಡ್ಬ್ಯಾಂಡ್ ಸೇವೆ ಮತ್ತು ವಿಮಾನಗಳಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ನೆರವಾಗಲಿದೆ. ಯೋಜನೆಯ ಜೀವಿತಾವಧಿ 14 ವರ್ಷಗಳಾಗಿದ್ದು, ಉಪಗ್ರಹವನ್ನು ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ನಿಯಂತ್ರಣ ಸಾಧಿಸಲಾಗಿದೆ. ಉಪಗ್ರಹವು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೌರ ಫಲಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಅದು ವಿವರಿಸಿದೆ.