ಶ್ರೀಹರಿಕೋಟಾ (ಆಂಧ್ರಪ್ರದೇಶ) :ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ (ಡಾಕಿಂಗ್) ಸಾಹಸದ ಮೊದಲ ಹೆಜ್ಜೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಮುಂದಡಿ ಇಟ್ಟಿತು. ಡಾಕಿಂಗ್ ನಡೆಸುವ ಎರಡು ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ60 ನೌಕೆಯು ಸೋಮವಾರ ರಾತ್ರಿ ಕಕ್ಷೆಗೆ ಸೇರಿಸಿತು.
ಉಪಗ್ರಹಗಳು ನಿಗದಿತ ಕಕ್ಷೆಗೆ ಸೇರಿವೆ. ಇನ್ನು ಕೆಲವೇ ದಿನಗಳಲ್ಲಿ ಡಾಕಿಂಗ್ ಪ್ರಯೋಗವನ್ನು ನಡೆಸಲಾಗುವುದು ಎಂದು ಯೋಜನೆಯ ನಿರ್ದೇಶಕ ಎಂ. ಜಯಕುಮಾರ್ ಅವರು ತಿಳಿಸಿದರು.
ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಪಿಎಸ್ಎಲ್ವಿ-ಸಿ60 ನೌಕೆಯು ತಲಾ 220 ಕೆಜಿ ತೂಕ ಇರುವ 'ಟಾರ್ಗೆಟ್' ಮತ್ತು 'ಚೇಸರ್' ಉಪಗ್ರಹಗಳನ್ನು ಹೊತ್ತು ಆಗಸಕ್ಕೆ ಹಾರಿತು. ಅಪೇಕ್ಷಿತ ಕಕ್ಷೆಯಲ್ಲಿ ಅವುಗಳು ಪ್ರಯಾಣ ಬೆಳೆಸಿವೆ ಎಂದು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರು ಹೇಳಿದರು.
ಏನಿದು ಡಾಕಿಂಗ್ ಪ್ರಯೋಗ:ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ಪ್ರಕ್ರಿಯೆಯನ್ನು ಡಾಕಿಂಗ್ ಎನ್ನುತ್ತಾರೆ. ಅಂದರೆ, ಕಕ್ಷೆಯಲ್ಲಿರುವ ಪ್ರತ್ಯೇಕ ಉಪಗ್ರಹಗಳನ್ನು ಯಾವುದೇ ನೌಕೆಗಳಿಲ್ಲದೇ, ಪರಸ್ಪರ ಜೋಡಿಸುವ ಕ್ಷಿಷ್ಟಕರ ವಿಧಾನವಾಗಿದೆ. ಉಪಗ್ರಹಗಳು ಸಂಧಿಸಲು ಸೆನ್ಸಾರ್ಗಳನ್ನ ಬಳಸಲಾಗುತ್ತದೆ.