ಸಿಯೋಲ್ : ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧರಿತ ಬೆಸ್ಪೋಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕಾಂಬೋ ವಾಷರ್-ಡ್ರೈಯರ್ (Bespoke Artificial Intelligence Combo washer-dryer) ಅನ್ನು ತಯಾರಿಸಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಇದನ್ನು ಜಾಗತಿಕವಾಗಿ ಬಿಡುಗಡೆ ಮಾಡುವುದಾಗಿ ಸ್ಯಾಮ್ ಸಂಗ್ ಸೋಮವಾರ ತಿಳಿಸಿದೆ.
25 ಕೆಜಿ ವಾಶಿಂಗ್ ಸಾಮರ್ಥ್ಯ ಮತ್ತು 15 ಕೆಜಿ ಹೀಟ್-ಪಂಪ್ ಒಣಗಿಸುವ ಸಾಮರ್ಥ್ಯ ಹೊಂದಿರುವ ಬೆಸ್ಪೋಕ್ ಎಐ ಕಾಂಬೋ ಕಳೆದ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾರುಕಟ್ಟೆಗೆ ಬಂದ ಕೇವಲ ಎರಡು ವಾರಗಳಲ್ಲಿ ಇದು ಭಾರಿ ಜನಪ್ರಿಯತೆ ಗಳಿಸಿದ್ದು, ದಕ್ಷಿಣ ಕೊರಿಯಾ ದೇಶಾದ್ಯಂತ 3,000 ಕ್ಕೂ ಹೆಚ್ಚು ಯುನಿಟ್ಗಳು ಮಾರಾಟವಾಗಿವೆ.
"ನಾವು ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಗೆ ಬೆಸ್ಪೋಕ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಾಂಬೋ ವಾಷರ್-ಡ್ರೈಯರ್ಗಳನ್ನು ಸಾಗಿಸುತ್ತಿದ್ದೇವೆ. ಇದೇ ತಿಂಗಳು ಅಮೆರಿಕದಲ್ಲಿ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಹಾಗೂ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು" ಎಂದು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಗೃಹೋಪಯೋಗಿ ವಿಭಾಗದ ಉಪಾಧ್ಯಕ್ಷ ಮೂ-ಹ್ಯುಂಗ್ ಲೀ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.