ನವದೆಹಲಿ: ಕೃಷಿ ಭೂಮಿಯಲ್ಲಿ ಬಳಸಲಾಗುವ ರಾಸಾಯನಿಕ ಗೊಬ್ಬರ ಮತ್ತು ಪ್ರಾಣಿಗಳ ತ್ಯಾಜ್ಯ ಬಳಕೆ ಹೆಚ್ಚಾಗಿದ್ದರಿಂದ 1980 ಮತ್ತು 2020ರ ನಡುವೆ ಮಾರಕ ನೈಟ್ರಸ್ ಆಕ್ಸೈಡ್ ಅನಿಲದ ಹೊರಸೂಸುವಿಕೆಯು ಶೇಕಡಾ 40 ರಷ್ಟು ಏರಿಕೆಯಾಗಿದೆ ಎಂದು ಹೊಸ ವರದಿಯೊಂದು ಬುಧವಾರ ತಿಳಿಸಿದೆ. ನೈಟ್ರಸ್ ಆಕ್ಸೈಡ್ ಇದು ಇಂಗಾಲದ ಡೈಆಕ್ಸೈಡ್ ಅಥವಾ ಮೀಥೇನ್ ಗಿಂತ ಹೆಚ್ಚು ಮಾಲಿನ್ಯಕಾರಕವಾದ ಅನಿಲವಾಗಿದೆ.
ಈ ರಾಷ್ಟ್ರಗಳಲ್ಲೇ ಹೆಚ್ಚು:15 ದೇಶಗಳ 55 ಸಂಸ್ಥೆಗಳ 58 ಸಂಶೋಧಕರ ತಂಡವು ತಯಾರಿಸಿದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ನ ಹೊಸ ವರದಿಯ ಪ್ರಕಾರ ಚೀನಾ, ಭಾರತ ಮತ್ತು ಅಮೆರಿಕ ಇವು ನೈಟ್ರಸ್ ಆಕ್ಸೈಡ್ ಹೊರಸೂಸುವ ಅಗ್ರ 10 ದೇಶಗಳಲ್ಲಿ ಸೇರಿವೆ. ಬ್ರೆಜಿಲ್, ರಷ್ಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಟರ್ಕಿ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳು ಸಹ ಈ ಮಾರಕ ಅನಿಲ ಹೊರಸೂಸುವಿಕೆಯಲ್ಲಿ ಮುಂಚೂಣಿಯಲ್ಲಿವೆ.
2020 ರಲ್ಲಿ ಕೃಷಿ ಚಟುವಟಿಕೆಗಳ ಕಾರಣದಿಂದ ನೈಟ್ರಸ್ ಆಕ್ಸೈಡ್ನ ಹೊರಸೂಸುವಿಕೆಯು 8 ಮಿಲಿಯನ್ ಮೆಟ್ರಿಕ್ ಟನ್ಗೆ ತಲುಪಿದೆ. ಇದು 1980 ರಲ್ಲಿ ಹೊರಸೂಸಲ್ಪಟ್ಟ 4.8 ಮಿಲಿಯನ್ ಮೆಟ್ರಿಕ್ ಟನ್ಗಿಂತ ಶೇಕಡಾ 67 ರಷ್ಟು ಹೆಚ್ಚಾಗಿದೆ ಎಂದು ಬೋಸ್ಟನ್ ಕಾಲೇಜಿನ ಸಂಶೋಧಕರ ನೇತೃತ್ವದಲ್ಲಿ ತಯಾರಿಸಲಾದ ಈ ವರದಿ ಹೇಳಿದೆ.
ಪರಿಸರ ಸೇರಿದ ನೈಟ್ರಸ್ ಆಕ್ಸೈಡ್:2020 ಮತ್ತು 2021ರ ಅವಧಿಯಲ್ಲಿ ಇತಿಹಾಸದಲ್ಲಿಯೇ ಅತ್ಯಧಿಕ ಪ್ರಮಾಣದ ನೈಟ್ರಸ್ ಆಕ್ಸೈಡ್ ಪರಿಸರಕ್ಕೆ ಸೇರಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಗಮನಾರ್ಹವಾಗಿ ಕಾರಣವಾಗಿದೆ ಎಂದು ಅರ್ಥ್ ಸಿಸ್ಟಮ್ ಸೈನ್ಸ್ ಡೇಟಾ ಜರ್ನಲ್ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.
ಪ್ಯಾರಿಸ್ ಒಪ್ಪಂದದಂತೆ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಬೇಕಾದರೆ ಮಾನವ ಚಟುವಟಿಕೆಗಳಿಂದ ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡುವುದು ಅಗತ್ಯವಾಗಿದೆ ಎಂದು ಬೋಸ್ಟನ್ ಕಾಲೇಜಿನ ಪ್ರಾಧ್ಯಾಪಕ ಹ್ಯಾಂಕಿನ್ ಟಿಯಾನ್ ಕರೆ ನೀಡಿದ್ದಾರೆ.