ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿ ಸಿಲುಕಿರುವ ನಾಸಾದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಕರೆತರಲು ನಾಸಾ-ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯು ಭಾನುವಾರ ಐಎಸ್ಎಸ್ನತ್ತ ಪಯಣ ಬೆಳೆಸಿದೆ. ಕ್ರೂ-9 (Crew-9) ತಂಡದ ಸದಸ್ಯರಾದ ನಾಸಾ ಗಗನಯಾತ್ರಿ ನಿಕ್ ಹೇಗ್ (ಕಮಾಂಡರ್) ಮತ್ತು ರೋಸ್ ಕಾಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ (ಮಿಷನ್ ಸ್ಪೆಷಲಿಸ್ಟ್) ಅವರು ಈ ನೌಕೆಯಲ್ಲಿ ಐಎಸ್ಎಸ್ಗೆ ತೆರಳಿದ್ದಾರೆ. ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರುವ ನಿರೀಕ್ಷೆಯಿದೆ.
ಫ್ಲೋರಿಡಾದ ಕೇಪ್ ಕೆನವೆರಾಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆಯಾದ ನಂತರ ನಾಸಾ-ಸ್ಪೇಸ್ ಎಕ್ಸ್ ಮಿಷನ್ ಸುರಕ್ಷಿತವಾಗಿ ಕಕ್ಷೆಯನ್ನು ತಲುಪಿದೆ. ಬಾಹ್ಯಾಕಾಶ ಉಡಾವಣಾ ಸಂಕೀರ್ಣ -40 ರಿಂದ ಉಡಾವಣೆಯಾದ ಮೊದಲ ಮಾನವ ಬಾಹ್ಯಾಕಾಶ ಯಾನವಾಗಿರುವ ಈ ಮಿಷನ್ ಮಹತ್ವದ್ದಾಗಿದೆ.
"ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣ ಬೆಳೆಸಿದೆ. ಹೊಸ ಗಗನಯಾತ್ರಿಗಳು ಐದು ತಿಂಗಳ ವೈಜ್ಞಾನಿಕ ಕಾರ್ಯಾಚರಣೆ ನಡೆಸಲಿದ್ದಾರೆ" ಎಂದು ನಾಸಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ನಾಸಾ ಪ್ರಕಾರ, ಭಾನುವಾರ ಸಂಜೆ 5:30ಕ್ಕೆ (ಭಾರತೀಯ ಕಾಲಮಾನ ಸೋಮವಾರ ಮುಂಜಾನೆ 3.30)ಕ್ಕೆ ನೌಕೆಯು ಐಎಸ್ಎಸ್ಗೆ ಲಂಗರು ಹಾಕಲಿದೆ.