ನವದೆಹಲಿ: ಅತ್ಯಂತ ತ್ವರಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮಂಗಳ ಗ್ರಹದ ಮೇಲಿಳಿದು ಅಲ್ಲಿನ ಮಣ್ಣು ಹಾಗೂ ಕಲ್ಲುಗಳ ಮಾದರಿಗಳನ್ನು ಮರಳಿ ಭೂಮಿಗೆ ತರುವ ವಿಧಾನಗಳನ್ನು ಅನ್ವೇಷಿಸುವ ಅಧ್ಯಯನಗಳಿಗಾಗಿ, ಏಳು ಕಂಪನಿಗಳಿಗೆ ನಾಸಾ ಶನಿವಾರ ತಲಾ 1.5 ಮಿಲಿಯನ್ ಡಾಲರ್ ಅನುದಾನ ಘೋಷಿಸಿದೆ. ಅನುದಾನ ಪಡೆದುಕೊಂಡಿರುವ ಲಾಕ್ ಹೀಡ್ ಮಾರ್ಟಿನ್, ಸ್ಪೇಸ್ಎಕ್ಸ್, ಬ್ಲೂ ಒರಿಜಿನ್, ಕ್ವಾಂಟಮ್ ಸ್ಪೇಸ್ ಮತ್ತು ನಾರ್ತ್ ರಾಪ್ ಗ್ರುಮನ್ ಸೇರಿದಂತೆ ಏಳು ಕಂಪನಿಗಳು ಮೂರು ತಿಂಗಳ ಅವಧಿಯ 10 ಸುದೀರ್ಘ ಅಧ್ಯಯನಗಳನ್ನು ನಡೆಸಲಿವೆ.
ಇದಲ್ಲದೆ ನಾಸಾ ಕೇಂದ್ರಗಳು, ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮತ್ತು ಜಾನ್ಸ್ ಹಾಪ್ ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬೊರೇಟರಿ ಸಹ ಈ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈ ಅಧ್ಯಯನಗಳು ಪೂರ್ಣಗೊಂಡ ನಂತರ ಎಲ್ಲಾ ಅಧ್ಯಯನಗಳ ಫಲಿತಾಂಶಗಳನ್ನು ಒಟ್ಟುಗೂಡಿಸಿ ಮಂಗಳನಿಂದ ಭೂಮಿಗೆ ಸ್ಯಾಂಪಲ್ಗಳನ್ನು ತರುವ ಯೋಜನೆಗಳನ್ನು ಯಾವ ರೀತಿ ಬದಲಾಯಿಸಬಹುದು ಅಥವಾ ಮತ್ತಷ್ಟು ಉತ್ತಮಗೊಳಿಸಬಹುದು ಎಂಬ ಬಗ್ಗೆ ನಾಸಾ ಪರಿಶೀಲಿಸಲಿದೆ.
ಪ್ರತಿ ಕಂಪನಿಯು ತಮ್ಮ 90 ದಿನಗಳ ಅಧ್ಯಯನಕ್ಕಾಗಿ $ 1.5 ಮಿಲಿಯನ್ ಧನಸಹಾಯ ಪಡೆಯಲಿದೆ. ನಾಸಾ ಆಯ್ಕೆ ಮಾಡಿದ ಐದು ಕಂಪನಿಗಳು ನಾಸಾದ ದೊಡ್ಡ ಗುತ್ತಿಗೆದಾರರ ಪಟ್ಟಿಯಲ್ಲಿವೆ ಮತ್ತು ಅಧ್ಯಯನ ಒಪ್ಪಂದಗಳಲ್ಲಿ ಇವು ಭಾಗಿಯಾಗುತ್ತಿವೆ. ಇನ್ನಿತರ ಎರಡು ಕಂಪನಿಗಳು ಸಣ್ಣ ಉದ್ಯಮ ಸಂಸ್ಥೆಗಳಾಗಿವೆ.