ಗ್ವಾಲಿಯರ್ (ಮಧ್ಯ ಪ್ರದೇಶ): ಕೃಷಿ, ರಕ್ಷಣೆ, ಔಷಧ ಸರಬರಾಜು ಸೇರಿದಂತೆ ವಿವಿಧ ಕಾರ್ಯಗಳಿಗೆ ಡ್ರೋನ್ ಬಳಕೆ ಇಂದು ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಆವಿಷ್ಕರಿಸಿರುವ ಡ್ರೋನ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣಕ್ಕೆ ಈ ಡ್ರೋನ್ ಕೇವಲ ವಸ್ತು ಸಾಗಣೆಯ ಡ್ರೋಣ್ ಅಲ್ಲ, ಮನುಷ್ಯರನ್ನೇ ಸಾಗಿಸುವ ಡ್ರೋನ್ ಆಗಿದೆ. ನೆರೆಯ ಚೀನಾ ದೇಶದ ಡ್ರೋನ್ ತಂತ್ರಜ್ಞಾನದಿಂದ ಈತ ಪ್ರೇರಣೆಗೊಂಡು ಇದನ್ನು ನಿರ್ಮಾಣ ಮಾಡಿದ್ದಾನೆ. ಸುಮಾರು 80 ಕೆ.ಜಿ ತೂಕ ಹೊಂದಿರುವ ಜನರು ಕೂಡ ಈ ಡ್ರೋನ್ ಮೂಲಕ ಹಾರಾಟ ನಡೆಸಬಹುದಾಗಿದೆ.
ಮೆಧಾಂಶ್ ತ್ರಿವೇದಿ ಈ ಆವಿಷ್ಕಾರದ ಜನಕ. ಸಿಂದಿಯಾ ಶಾಲೆಯಲ್ಲಿ 12ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಈತ 3.5 ಲಕ್ಷ ವೆಚ್ಚದಲ್ಲಿ ಈ ಡ್ರೋನ್ ತಯಾರಿಸಿದ್ದು, ಇದಕ್ಕಾಗಿ ಮೂರು ತಿಂಗಳ ಕಾಲ ಶ್ರಮವಹಿಸಿದ್ದಾನೆ. ಈ ಡ್ರೋನ್ಗೆ ಎಂಎಲ್ಡಿಟಿ 01 ಎಂದು ಹೆಸರಿಟ್ಟಿದ್ದಾನೆ.
ಚೀನಿ ಡ್ರೋನ್ ತಂತ್ರಜ್ಞಾನದಿಂದ ಪ್ರೇರಣೆ:ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಮೆಧಾಂಶ್, ಚೀನಾದ ಡ್ರೋನ್ಗಳನ್ನು ನೋಡಿದ ಬಳಿಕ ಅವುಗಳಿಂದ ನಾನು ಪ್ರೇರೆಪಿತನಾದೆ. ಹಲವು ತಂತ್ರಜ್ಞಾನ ಸೇರಿದಂತೆ ಡ್ರೋನ್ ಅಭಿವೃದ್ಧಿಯಲ್ಲಿ ನನಗೆ ನನ್ನ ಶಿಕ್ಷಕರಾದ ಮನೋಜ್ ಮಿಶ್ರಾ ಪ್ರೋತ್ಸಾಹ ನೀಡಿದರು.
ಮನುಷ್ಯರನ್ನೇ ಹೊತ್ತೊಯ್ಯುವ ಡ್ರೋನ್:ಈ ಡ್ರೋನ್ 45 ಹಾರ್ಸ್ಪವರ್ನಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ 6 ನಿಮಿಷಗಳ ಕಾಲ ನಿರಂತರವಾಗಿ ಹಾರಾಡಬಲ್ಲದು. 80 ಕೆಜಿ ತೂಕದವರೆಗಿನ ವ್ಯಕ್ತಿಗಳು ಇದರಲ್ಲಿ ಹಾರಾಟ ನಡೆಸಬಹುದು. ಈ ಡ್ರೋನ್ 1.8 ಮಿ ಅಗಲವಿದ್ದು, ಇದರ ಸುರಕ್ಷತಾ ದೃಷ್ಟಿಯಿಂದ ಕೇವಲ 10 ಮೀಟರ್ ಎತ್ತರದವರೆಗೆ ಮಾತ್ರ ಹಾರಾಟ ನಡೆಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕೃಷಿ ಡ್ರೋನ್ಗೆ ಬಳಕೆ ಮಾಡುವ ನಾಲ್ಕು ಮೋಟರ್ ಅನ್ನು ಇದಕ್ಕೆ ಬಳಕೆ ಮಾಡಲಾಗಿದೆ.