ಸಿಯೋಲ್ : ದಕ್ಷಿಣ ಕೊರಿಯಾದ ಪ್ರಮುಖ ವಾಹನ ತಯಾರಕ ಕಂಪನಿಗಳಾದ ಹ್ಯುಂಡೈ ಮೋಟಾರ್ ಮತ್ತು ಕಿಯಾ ಸೋಮವಾರ ಇಂಡೋನೇಷ್ಯಾದಲ್ಲಿ ತಮ್ಮ ಸಮಗ್ರ ಏರ್ ಟ್ಯಾಕ್ಸಿ ಸೇವಾ ತಂತ್ರಜ್ಞಾನವನ್ನು ಅನಾವರಣಗೊಳಿಸಿವೆ. ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತರಾ ಬಳಿಯ ಸಮರಿಂಡಾ ವಿಮಾನ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಂಯೋಜಿತ ಸಮಗ್ರ ಸುಧಾರಿತ ವಾಯು ಚಲನಶೀಲತೆ (ಎಎಎಂ) (advanced air mobility -AAM) ತಂತ್ರಜ್ಞಾನ ಪ್ರದರ್ಶಿಸಲಾಯಿತು.
ಹ್ಯುಂಡೈ ಮತ್ತು ಕಿಯಾ ಕಂಪನಿಯ ಬೇಡಿಕೆ - ಸ್ಪಂದಿಸುವ ಸಾರಿಗೆ ಸೇವೆಯಾದ ಶುಕಲ್ ಮತ್ತು ಸಂಬಂಧಿತ ಎಎಎಂ ಸೇವೆಗಳು ವಾಸ್ತವದಲ್ಲಿ ಹೇಗೆ ಬಳಕೆಯಾಗುತ್ತವೆ ಎಂಬುದನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಇಂಡೋನೇಷ್ಯಾದ ಸಾರಿಗೆ ಸಚಿವಾಲಯ, ನುಸಂತರಾ ಕ್ಯಾಪಿಟಲ್ ಸಿಟಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿದ್ದವರಿಗೆ ಶುಕಲ್ ಸೇವೆಯನ್ನು ನೇರವಾಗಿ ಬಳಸಿ ನೋಡುವ ಅವಕಾಶ ನೀಡಲಾಯಿತು.
ಕೊರಿಯಾ ಏರೋಸ್ಪೇಸ್ ರಿಸರ್ಚ್ ಇನ್ ಸ್ಟಿಟ್ಯೂಟ್ನ ವಾಯು ವಾಹನ ಒಪ್ಪಾವ್ ಬಳಸಿ ವಿಮಾನ ಪ್ರದರ್ಶನ ನೀಡಲಾಯಿತು. ಹ್ಯುಂಡೈ ಮೋಟಾರ್ ಗ್ರೂಪ್ ನ ಪವರ್ ಟ್ರೇನ್ ತಂತ್ರಜ್ಞಾನದಿಂದ ಚಾಲಿತವಾದ ಒಪ್ಪಾವ್ ಪೂರ್ವನಿರ್ಧರಿತ ಮಾರ್ಗದಲ್ಲಿ ಸುಮಾರು 2 ಕಿಲೋಮೀಟರ್ ಹಾರಾಟ ನಡೆಸಿತು. 18,000 ಕ್ಕೂ ಹೆಚ್ಚು ದ್ವೀಪಗಳನ್ನು ಒಳಗೊಂಡಿರುವ ವಿಶಾಲವಾದ ಭೂಪ್ರದೇಶವನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ರಸ್ತೆ ಸಾರಿಗೆ ವ್ಯವಸ್ಥೆ ಸುಧಾರಿಸುವುದು ಬಹಳ ಕಷ್ಟಕರವಾಗಿದೆ. ಹೀಗಾಗಿ ಇಲ್ಲಿ ಏರ್ ಟ್ಯಾಕ್ಸಿ ವ್ಯವಹಾರ ಬೆಳೆಯಲು ಹೆಚ್ಚಿನ ಅವಕಾಶವಿದೆ.