Drone Technology For Fisheries Sector:ದೇಶದ ಮೀನುಗಾರಿಕಾ ವಲಯಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಇದರಿಂದ ಉದ್ಯಮಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಈ ಕುರಿತು ಕೇರಳದ ಕೊಚ್ಚಿಯಲ್ಲಿ ಇಂದು ವಿಶೇಷ ಕಾರ್ಯಾಗಾರ ನಡೆಯಲಿದ್ದು, ನೂರಾರು ಮಹಿಳಾ ಮೀನುಗಾರರು, ತಜ್ಞರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ಮೀನುಗಾರಿಕಾ ರಾಜ್ಯ ಸಚಿವ ಜಾರ್ಜ್ ಕುರಿಯನ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.
ಕೇಂದ್ರದ ಮೀನುಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ), ಐಸಿಎಆರ್-ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ (ಸಿಎಂಎಫ್‌ಆರ್‌ಐ) ಕಾರ್ಯಾಗಾರ ನಡೆಯಲಿದೆ.
ಎನ್‌ಎಫ್‌ಡಿಬಿ ಹೊಸ ಸ್ಟಾರ್ಟಪ್‌ಗಳ ಜೊತೆಗೆ ಮೀನುಗಾರಿಕೆ ಮತ್ತು ಅಕ್ವಾಕಲ್ಚರ್ ವಲಯದಲ್ಲಿ ಡ್ರೋನ್ ತಂತ್ರಜ್ಞಾನದ ಪರಿವರ್ತಕ ಸಾಮರ್ಥ್ಯವನ್ನು ಎತ್ತಿ ತೋರಿಸುವ ಕಾರ್ಯವನ್ನು ಇದು ಮಾಡಲಿದೆ.
ಮೀನು ಸಾಗಣೆ, ಮೀನು ಆಹಾರ ವಿತರಣೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಲೈಫ್ ಜಾಕೆಟ್ ವಿತರಣೆ ಮುಂತಾದ ಮೀನುಗಾರಿಕೆಯಲ್ಲಿನ ವಿವಿಧ ಡ್ರೋನ್ ಅಪ್ಲಿಕೇಶನ್‌ಗಳ ಕುರಿತು ಲೈವ್ ಡ್ರೋನ್ ಪ್ರದರ್ಶನ ನಡೆಯಲಿದೆ. ಹೊಸ ತಾಂತ್ರಿಕ ಪ್ರಗತಿಯನ್ನು ಹೈಲೈಟ್ ಮಾಡಲು ಒಂದು ವಿಶಿಷ್ಟ ವೇದಿಕೆಯನ್ನು ಈ ಕಾರ್ಯಾಗಾರ ನೀಡುತ್ತದೆ. ಮೀನುಗಾರಿಕೆ ವಲಯವನ್ನು ಪರಿವರ್ತಿಸುವಲ್ಲಿ ಮತ್ತು ಅದರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಡ್ರೋನ್ ತಂತ್ರಜ್ಞಾನದ ಪ್ರಮುಖ ಪಾತ್ರವನ್ನು ಇಲ್ಲಿ ಕೇಂದ್ರೀಕರಿಸಲಾಗಿದೆ.