ನವದೆಹಲಿ:ಭಾರತದಲ್ಲಿ ಚರ್ಚೆ ಹುಟ್ಟುಹಾಕಿರುವ ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್, ಸಂದೇಶಗಳ ಎನ್‌ಕ್ರಿಪ್ಶನ್ ನ ನಿಯಮವನ್ನು ತೆಗೆದುಹಾಕಲು ನಿರಾಕರಿಸಿದ್ದು, ಹಾಗೊಂದು ವೇಳೆ ಒತ್ತಡ ಹಾಕಿದರೆ ದೇಶೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಹೇಳಿದೆ.
ಏನಿದು ಎನ್‌ಕ್ರಿಪ್ಶನ್ ಗೌಪ್ಯತೆ:ಎನ್‌ಕ್ರಿಪ್ಶನ್ ಹಾಗೂ ವ್ಯಕ್ತಿಯ ಖಾಸಗಿ ಗೌಪ್ಯತೆ ಕಾಪಾಡಿಕೊಳ್ಳುವ ತನ್ನ ನಿಯಮಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ವಾಟ್ಸ್ಆ್ಯಪ್ ಹೇಳಿದೆ. ಆದರೆ ಸರ್ಕಾರ ಆ್ಯಪ್ನಲ್ಲಿರುವ ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಕಂಪನಿ ಸಹಕರಿಸಬೇಕು ಹಾಗೂ ಎನ್ಸ್ಕ್ರಿಪ್ಶನ್ ಅನ್ನು ತೆಗೆಯಲು ಅನುಮತಿಸಬೇಕು. ಮೂಲ ಪತ್ತೆ ಹಚ್ಚಲು ಯಾವುದೇ ಮಾರ್ಗವಿಲ್ಲದಿದ್ದರೆ, ಕಂಪನಿಯು ಬೇರೆ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಸರ್ಕಾರ ಈ ಹಿಂದೆ ಕಂಪನಿಗೆ ತಾಕೀತು ಮಾಡಿತ್ತು.
2019 ರಲ್ಲಿ ಗುರುತಿಸುವಿಕೆ ನಿರ್ಬಂಧಿಸುವ ಎನ್‌ಕ್ರಿಪ್ಶನ್ ತೆಗೆದು ಹಾಕಲು ಕೇಂದ್ರವು ವ್ಯಾಟ್ಸ್ಆ್ಯಪ್ಗೆ ನಿರ್ದೇಶನ ನೀಡಿತ್ತು. ಯಾವ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬುದನ್ನು ಅದರ ವಿಷಯಗಳನ್ನು ಓದದೆಯೇ ಗುರುತಿಸಲು ಸರ್ಕಾರ ಮತ್ತು WhatsApp ಗೆ ಇದು ಸಹಕಾರಿಯಾಗಿದೆ. ಇದೀಗ, ದೆಹಲಿ ಹೈಕೋರ್ಟ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) 2021 ರ ನಿಯಮವನ್ನು ಪ್ರಶ್ನಿಸಿ WhatsApp ಮತ್ತು Meta ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಕಂಪನಿಯು ಎನ್‌ಕ್ರಿಪ್ಶನ್ ತೆಗೆದು ಹಾಕಲು ಸಾಧ್ಯವಿಲ್ಲ. ಇದು ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ ಎಂದಿದ್ದು, ಹಾಗೊಂದು ವೇಳೆ ಗೌಪ್ಯತೆ ನಿಯಮವನ್ನು ತೆಗೆದು ಹಾಕುವಂತೆ ಕೇಳಿದರೆ, ಭಾರತೀಯ ಮಾರುಕಟ್ಟೆಯನ್ನು ತೊರೆಯುವುದಾಗಿ ಹೇಳಿದೆ.
ಆಗಸ್ಟ್ 14 ರಂದು ಪ್ರಕರಣಗಳ ವಿಚಾರಣೆ - ಏನಿದು ಪ್ರಕರಣ?: ಐಟಿ ನಿಯಮ 2021 ರಲ್ಲಿನ 4(2) ನಿಯಮವು ಮೆಸೇಜಿಂಗ್ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಸಂದೇಶವನ್ನು ಕಳುಹಿಸಲು ಆದೇಶವಿದ್ದರೆ ಯಾರು ಸಂದೇಶವನ್ನು ಕಳುಹಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂಬ ನಿಯಮವನ್ನು ಮಾಡಿದೆ.
"ಪ್ರಾಥಮಿಕವಾಗಿ ಸಂದೇಶ ಕಳುಹಿಸುವಿಕೆಯ ಸ್ವರೂಪದಲ್ಲಿ ಸೇವೆಗಳನ್ನು ಒದಗಿಸುವ ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯು ತನ್ನ ಕಂಪ್ಯೂಟರ್ ಸಂಪನ್ಮೂಲದಲ್ಲಿನ ಮಾಹಿತಿಯು, ಯಾರು ಪ್ರಥಮವಾಗಿ ಸಂದೇಶ ಕಳುಹಿಸಿದ್ದಾರೆ ಎಂಬುದನ್ನು ಕಂಡು ಹಿಡಿಯಲು ನ್ಯಾಯಾಲಯವು ಅಂಗೀಕರಿಸಿದ ನ್ಯಾಯಾಂಗ ಆದೇಶ ಅಥವಾ ಸೆಕ್ಷನ್ ಅಡಿ ಇದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳಿಗೆ ಐಟಿ ನಿಯಮ 2021 ಸಹಾಯ ಮಾಡಲಿದೆ. ತನಿಖಾಧಿಕಾರಿಗಳು ಕೇಳಿದಾಗ ಆ ಮಾಹಿತಿಯನ್ನು ಮೆಸೇಜಿಂಗ್ ಕಂಪನಿಗಳು ಒದಗಿಸಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ 2009 ರ 69ನೇ ಸಕ್ಷಮ ಪ್ರಾಧಿಕಾರದ (ಮಾಹಿತಿ ಪ್ರತಿಬಂಧಕ, ಮೇಲ್ವಿಚಾರಣೆ ಮತ್ತು ಡಿ ಕ್ರಿಪ್ಶನ್‌ಗಾಗಿ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಗಳು ಹೇಳುತ್ತವೆ.
ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅತ್ಯಾಚಾರ, ಅಶ್ಲೀಲ ವಿಷಯ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಈ ನಿಯಮದ ಅನ್ವಯ ಮೂಲ ಮಾಹಿತಿಯನ್ನ ಮೆಸೇಜಿಂಗ್ ಸೇವೆ ಒದಗಿಸುವ ಕಂಪನಿಗಳಿಂದ ಮಾಹಿತಿ ಹುಡುಕಲಾಗುತ್ತದೆ. ಕಾನೂನು ಉಲ್ಲಂಘಿಸಿದರೆ, ಈ ನಿಯಮದ ಅನ್ವಯ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ಒದಗಿಸುತ್ತದೆ.