ನವದೆಹಲಿ: ಈ ವರ್ಷದ ಜೂನ್-ಜುಲೈ ವೇಳೆಗೆ ಕೃತಕ ಬುದ್ಧಿಮತ್ತೆ (ಎಐ)ಯ ಕರಡು ನಿಯಂತ್ರಣ ಚೌಕಟ್ಟನ್ನು ಜಾರಿಗೊಳಿಸಲು ಕಾರ್ಯೋನ್ಮುಖವಾಗಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದೆ. ಹೊಸ ತಂತ್ರಜ್ಞಾನದಿಂದ ತಯಾರಿಸಲಾದ ಡೀಪ್ ಫೇಕ್ ಗಳ ಹೆಚ್ಚಳ ಮತ್ತು ಬಳಕೆದಾರರಿಗೆ ಎದುರಾಗುತ್ತಿರುವ ಅಪಾಯಗಳ ಹಿನ್ನೆಲೆಯಲ್ಲಿ ಸರ್ಕಾರ ನಿಯಂತ್ರಕ ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ.
ರಾಜಧಾನಿ ದೆಹಲಿಯಲ್ಲಿ ನಾಸ್ಕಾಮ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸರ್ಕಾರವು ಕೃತಕ ಬುದ್ಧಿಮತ್ತೆ ನಿಯಂತ್ರಣ ಚೌಕಟ್ಟಿನ ಕರಡನ್ನು ಸಿದ್ಧಪಡಿಸುತ್ತಿದೆ ಮತ್ತು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದರು.
"ಆರ್ಥಿಕ ಬೆಳವಣಿಗೆಗೆ ಎಐ ಅನ್ನು ಬಳಸಿಕೊಳ್ಳುವುದು ಮತ್ತು ಸಂಭಾವ್ಯ ಅಪಾಯಗಳು ಮತ್ತು ಹಾನಿಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆ. ನಾವು ಎಐನ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದ್ದೇವೆ, ಆದರೆ ಅದೇ ಸಮಯಕ್ಕೆ ಅದರ ದುರುಪಯೋಗವನ್ನು ತಡೆಗಟ್ಟಲು ನಿಯಂತ್ರಕ ಮಾರ್ಗಸೂಚಿಗಳನ್ನು ಸಹ ಜಾರಿಗೊಳಿಸಲಿದ್ದೇವೆ" ಎಂದು ಅವರು ಹೇಳಿದರು.
ಇತ್ತೀಚೆಗೆ ಬಿಡುಗಡೆಯಾದ ನಾಸ್ಕಾಮ್-ಬಿಸಿಜಿ ವರದಿಯು, ಭಾರತದ ಎಐ ಮಾರುಕಟ್ಟೆಯು ಶೇಕಡಾ 25 ರಷ್ಟು ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) 2027 ರ ವೇಳೆಗೆ 17 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದೆ ಎಂದು ಹೇಳಿದೆ.