ಟೋಕಿಯೊ, ಜಪಾನ್: ಇಲ್ಲಿನ ಉತ್ತರ ಕರಾವಳಿಯಲ್ಲಿ ಭೀಕರ ಭೂಕಂಪ ಮತ್ತು ಸುನಾಮಿಯ ದುರಂತ ಸಂಭವಿಸಿ ಇಂದಿಗೆ 13 ವರ್ಷಗಳು ಕಳೆದಿವೆ. ಈ ದುರಂತದಲ್ಲಿ ಸುಮಾರು 20,000 ಜನ ಸಾವಿಗೀಡಾದರು. ಸಂಪೂರ್ಣ ಪಟ್ಟಣಗಳು ಈ ಘಟನೆಯಲ್ಲಿ ನಾಶವಾದವು. ಇದರಿಂದ ಇಡೀ ದೇಶದಲ್ಲಿ ಪರಮಾಣು ವಿಕಿರಣದ ಭೀತಿಯನ್ನು ಸೃಷ್ಟಿಸಿತು. ಈ ದುರಂತ ಸಂಭವಿಸಿ 13 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಅಣು ಸ್ಥಾವರದಲ್ಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಈಗ ಏನಾಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
13 ವರ್ಷಗಳ ಹಿಂದೆ ಏನಾಗಿತ್ತು?: ಮಾರ್ಚ್ 11, 2011 ರಂದು 9.0 ತೀವ್ರತೆಯ ಭೂಕಂಪ ಸಂಭವಿಸಿ ಉತ್ತರ ಕರಾವಳಿ ಪಟ್ಟಣಗಳಾದ ಇವಾಟೆ, ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳಲ್ಲಿ ಭಾರಿ ಸುನಾಮಿ ಉಂಟಾಗಿತ್ತು. ಕೆಲ ಪ್ರದೇಶಗಳಲ್ಲಿ 15 ಮೀಟರ್ (50 ಅಡಿ) ಎತ್ತರಕ್ಕೆ ಪುಟಿದ ಸುನಾಮಿ ಪರಮಾಣು ಸ್ಥಾವರಕ್ಕೆ ಅಪ್ಪಳಿಸಿ, ಅದರ ವಿದ್ಯುತ್ ಸರಬರಾಜು ಮತ್ತು ಇಂಧನ ತಂಪಾಗಿಸುವ ವ್ಯವಸ್ಥೆಗಳನ್ನು ನಾಶಪಡಿಸಿತು ಮತ್ತು ರಿಯಾಕ್ಟರ್ ಸಂಖ್ಯೆ 1, 2 ಮತ್ತು 3 ಗಳ ನಾಶಕ್ಕೆ ಕಾರಣವಾಯಿತು. ಹೈಡ್ರೋಜನ್ ಸ್ಫೋಟಗಳು ಈ ಪ್ರದೇಶದಲ್ಲಿ ಭಾರಿ ವಿಕಿರಣ ಸೋರಿಕೆ ಮತ್ತು ಮಾಲಿನ್ಯಕ್ಕೆ ಕಾರಣವಾದವು.
ಸುನಾಮಿ ಬರಲಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ ಎಂದು ಆಗ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಹೋಲ್ಡಿಂಗ್ಸ್ ಹೇಳಿತ್ತು. ಸುರಕ್ಷತಾ ನಿರ್ಲಕ್ಷ್ಯ, ನಿಯಂತ್ರಕರ ನಿರ್ಲಕ್ಷ್ಯ ಮತ್ತು ಒಳಸಂಚುಗಳ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎಂದು ಸರ್ಕಾರ ಮತ್ತು ಸ್ವತಂತ್ರ ತನಿಖೆಗಳು ಮತ್ತು ಕೆಲ ನ್ಯಾಯಾಲಯದ ತೀರ್ಪುಗಳು ತಿಳಿಸಿವೆ. ಅಂದಿನಿಂದ ಜಪಾನ್ ಕಠಿಣ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಂಡಿದೆ ಮತ್ತು ಒಂದು ಹಂತದಲ್ಲಿ ಪರಮಾಣು ಶಕ್ತಿಯ ಬಳಕೆ ನಿಲ್ಲಿಸುವ ಹಂತಕ್ಕೆ ಬಂದಿತ್ತು. ಆದರೆ, ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಸರ್ಕಾರವು ಆ ನೀತಿಯನ್ನು ಕೈಬಿಟ್ಟು ವಿದ್ಯುತ್ ಸರಬರಾಜಿನ ಮುಖ್ಯ ಮೂಲವಾಗಿ ಮತ್ತೆ ಪರಮಾಣು ಶಕ್ತಿಯನ್ನು ಬಳಸಲು ಮುಂದಾಗಿದ್ದಾರೆ.