ಚಾಮರಾಜನಗರ:ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಯುಗಾದಿ ಪ್ರಯುಕ್ತ ರೈತರು 'ಹೊನ್ನೇರು' ಕಟ್ಟಿ ಕೃಷಿ ಚುಟುವಟಿಕೆಯನ್ನು ಆರಂಭಿಸಿದ್ದಾರೆ. ಬಹುಪಾಲು ಹಳ್ಳಿಗಳಲ್ಲಿ ಯುಗಾದಿಯಂದು 'ಹೊನ್ನೇರು' ಕಟ್ಟುವ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಇಲ್ಲಿಯ ದೊಡ್ಡರಾಯ ಪೇಟೆ, ಹಂಗಳ, ಹೆಬ್ಬಸೂರು, ಜ್ಯೋತಿಗೌಡನಪುರ, ಹೊನ್ನೂರು, ಹನೂರು ತಾಲ್ಲೂಕಿನ ರಾಮಾಪುರ, ಪೊನ್ನಾಚಿ ಮೊದಲಾದ ಗ್ರಾಮಗಳಲ್ಲಿ ಇಂದು ಹೊನ್ನೇರು ಕಟ್ಟಲಾಗುತ್ತದೆ.
ಏನಿದು ಹೊನ್ನೇರು ಸಂಪ್ರದಾಯ?:ಯುಗಾದಿ ಶುರುವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. 'ಹೊನ್ನೇರು' ಅನ್ನದಾತರ ಚಿನ್ನದ ತೇರಾಗಿದೆ. ಬಹುತೇಕ ಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ನೂತನ ವರ್ಷದ ಮೊದಲ ದಿನ ರೈತರು ಆ ವರ್ಷದ ಕೃಷಿ ಚಟುವಟಿಕೆ ವಿಧಿವತ್ತಾಗಿ ಅಡಿಯಿಡುವ ಸಂಪ್ರದಾಯ ತಲತಲಾಂತರದಿಂದ ನಡೆದುಕೊಂಡು ಬಂದಿದೆ.
ಎತ್ತುಗಳಿಗೆ ಅಲಂಕಾರ:ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕು ಮುನ್ನ ರೈತರು ತಮ್ಮ ಎತ್ತುಗಳನ್ನು ತೊಳೆಯುತ್ತಾರೆ. ಬಳಿಕ ಎತ್ತುಗಳ ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿ ಕಟ್ಟಿ ಅಲಂಕರಿಸುತ್ತಾರೆ.
ಎತ್ತಿನಗಾಡಿಗಳಿಗೂ ಸಿಂಗಾರ:ಎತ್ತಿನ ಗಾಡಿಗಳನ್ನು ಸಹ ಬಣ್ಣ-ಬಣ್ಣದಗಳಿಂದ ಶೃಂಗರಿಸಿ, ಮಾವಿನ ಎಲೆ, ಬಾಳೆ ಕಂದು, ಹೊಂಬಾಳೆಗಳನ್ನು ಕಟ್ಟಿ ಶೃಂಗರಿಸಿದ ಎತ್ತಿನ ಗಾಡಿಗಳಿಗೆ ಸಾಂಕೇತಿಕವಾಗಿ ಒಂದಿಷ್ಟು ಕೊಟ್ಟಿಗೆ ಗೊಬ್ಬರ ತುಂಬುತ್ತಾರೆ. ಬಳಿಕ ನೊಗ ಹೂಡಿದ ಎತ್ತುಗಳು ಹಾಗೂ ಎತ್ತಿನ ಗಾಡಿಗಳನ್ನು ಮಂಗಳವಾದ್ಯಗಳೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಹೊನ್ನೇರುಗಳ ಮೆರವಣಿಗೆ ಸಾಗುತ್ತಿದ್ದಾಗ ಮುತ್ತೈದೆಯರು ಪೂಜೆ ಸಲ್ಲಿಸುತ್ತಾರೆ. ಅನಂತರ ರೈತರು ತಮ್ಮ ಜಮೀನುಗಳಲ್ಲಿ ಗೊಬ್ಬರ ಸುರಿದು, ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.
ಹಬ್ಬಕ್ಕೆ ಭೂರಿ ಭೋಜನ:ಗೊಬ್ಬರ ಸಿಂಪಡಿಸಿ ಬಳಿಕ ಮನೆಗೆ ಹಿಂತಿರುಗುವ ರೈತರು ಮನೆಯಲ್ಲಿ ಇಡ್ಲಿ, ಹೋಳಿಗೆ ಹಾಗೂ ಪಾಯಸದ ಭೋಜನ ಸವಿದು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. 'ಹೊನ್ನೇರು' ಅನ್ನದಾತನ ರಥವೇ ಆಗಿದ್ದು ಇಡೀ ಕುಟುಂಬದವರು ಹೊಸ ಬಟ್ಟೆ ಧರಿಸಿ ಚಿಣ್ಣರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಾರೆ. ರೈತನ ಅವಿಭಾಜ್ಯ ಅಂಗವಾದ ಜೋಡೆತ್ತಿಗೆ ಇಂದು ವಿಶೇಷ ಸ್ಥಾನ ಸಿಗಲಿದ್ದು, ಅದಕ್ಕೆ ಮಕ್ಕಳ ಕೈಯಿಂದ ಪೂಜೆ ಸಲ್ಲಿಸುವುದು ವಿಶೇಷ. ವರ್ಷದ ಮೊದಲ ದಿನವಾದ ಇಂದು ಜಿಲ್ಲೆಯ ರೈತರು ವಿಧಿವತ್ತಾಗಿ ಕೃಷಿಗೆ ಅಡ್ಡಿಯಿಟ್ಟಿದ್ದಾರೆ, 'ಹೊನ್ನೇರು' ರೈತರ ಯುಗಾದಿ ಸಂಭ್ರಮ ಹೆಚ್ಚಿಸಿದೆ.
ಇದನ್ನೂ ಓದಿ:ಯುಗಾದಿಯ ದಿನ ಹೊಸ ಪಂಚಾಂಗದ ಪೂಜೆ ಏಕೆ ಮಾಡುತ್ತಾರೆ, ಬೇವು-ಬೆಲ್ಲದ ಮಹತ್ವವೇನು?: ಅಮರೇಶ ಶಾಸ್ತ್ರಿ ಗುರೂಜಿ ಸಂದರ್ಶನ - Ugadi Festival