ಬೆಂಗಳೂರು:ಮೊಬೈಲ್ ಅಂಗಡಿಯಲ್ಲಿ ಹಾಕಲಾಗಿದ್ದ ಹಾಡಿನ ಸೌಂಡ್ ಜಾಸ್ತಿಯಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿ, ಅಂಗಡಿ ಮಾಲೀಕನ ಮೇಲೆ ಯುವಕರು ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಭಾನುವಾರ ನಡೆದಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಲೇಮಾನ್, ಶನವಾಜ್ ಹಾಗೂ ರೋಹಿತ್ ಬಂಧಿತ ಆರೋಪಿಗಳು. ಕೃಷ್ಣ ಟೆಲಿಕಾಂ ಮಾಲೀಕ ಮುಖೇಶ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು.
ಹಲ್ಲೆಗೊಳಗಾಗಿರುವ ಮುಖೇಶ್ ಕೆಲ ವರ್ಷಗಳಿಂದ ನಗರ್ತಪೇಟೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ಸಹ ಅಕ್ಕಪಕ್ಕದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 6.30ರ ಸುಮಾರಿಗೆ ಅಂಗಡಿಗೆ ಬಂದ ಯುವಕರು, ''ಅಂಗಡಿಯಲ್ಲಿ ಹಾಕಲಾಗಿದ್ದ ಹಾಡನ್ನು ನಿಲ್ಲಿಸು, ಜೋರಾಗಿ ಹಾಡು ಹಾಕುವುದರಿಂದ ನಮಗೆ ಸಮಸ್ಯೆಯಾಗುತ್ತಿದೆ'' ಎಂದು ಪಟ್ಟು ಹಿಡಿದ್ದಾರೆ. ಈ ವೇಳೆ ಮಾಲೀಕ ಮುಖೇಶ್ ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.