ಬೆಳಗಾವಿ:ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುವಕರು ಲಾರಿ ತಡೆದು, ಚಾಲಕನಿಗೆ ಥಳಿಸಿರುವ ಘಟನೆ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲಾರಿಯಲ್ಲಿ 15 ರಿಂದ 20 ಗೋವುಗಳ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ 30ಕ್ಕೂ ಹೆಚ್ಚು ಯುವಕರ ಗುಂಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ತಡೆದಿತ್ತು. ಈ ವೇಳೆ ಲಾರಿ ಚಾಲಕ, ಸಿಬ್ಬಂದಿ ಮತ್ತು ಯುವಕರ ಮಧ್ಯೆ ವಾಗ್ವಾದ ಉಂಟಾಗಿದೆ. ಬಳಿಕ ಮಾತಿಗೆ ಮಾತು ಬೆಳೆದಾಗ ಲಾರಿ ಚಾಲಕ ಮತ್ತು ಕ್ಲೀನರ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಜೊತೆಗೆ ಲಾರಿ ಮೇಲೆ ಕೂಡ ದಾಳಿ ಮಾಡಿದ್ದರಿಂದ ಲಾರಿ ಗಾಜು ಒಡೆದಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಸಂಜೆ 7ರ ಸುಮಾರಿಗೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಕೆಲ ಕಾಲ ಸಂಚಾರ ವ್ಯತ್ಯಯವೂ ಉಂಟಾಗಿತ್ತು. ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾರಿ ಚಾಲಕ ಮತ್ತು ಕ್ಲೀನರ್ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಡಿಸಿಪಿ ರೋಹನ್ ಜಗದೀಶ್:ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್, ಸಂಜೆ 7 ಗಂಟೆಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ರಕ್ನಲ್ಲಿ ಆಕಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಯುವಕರ ಗುಂಪು ತಡೆದಿತ್ತು. ಆಗ ಡ್ರೈವರ್ ಹಾಗೂ ಸ್ಥಳೀಯ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಡ್ರೈವರ್ ಹಾಗೂ ಕ್ಲೀನರ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದು, ಹೆಚ್ಚಿನ ವಿವರ ಪಡೆದು ನಂತರ ಮಾಹಿತಿ ನೀಡುತ್ತೇವೆ. ನಮಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ 10 ರಿಂದ 12 ಆಕಳು ಲಾರಿಯಲ್ಲಿದ್ದವು ಎನ್ನಲಾಗಿದೆ. ಇನ್ನು ಪ್ರಕರಣ ಸಂಬಂಧ ನಾಲ್ವರು ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಿ, ತಪ್ಪಿತಸ್ಥರು ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದರು.