ಬೆಳಗಾವಿ:ನಗರದ ಹೊರವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಬೈಕ್ ಸವಾರನನ್ನು ಪತ್ತೆ ಮಾಡಲಾಗಿದೆ. ನಿನ್ನೆ ರಾತ್ರಿ ನಾಪತ್ತೆಯಾಗಿದ್ದ ಅಲತಗಾ ಗ್ರಾಮದ ಯುವಕ ಓಂಕಾರ ಪಾಟೀಲ (23) ಮೃತದೇಹ ಪತ್ತೆಯಾಗಿದೆ.
ಜ್ಯೋತಿನಾಥ ಪಾಟೀಲ ಜೊತೆಗೆ ಓಂಕಾರ ಬೈಕ್ ಮೇಲೆ ಕಂಗ್ರಾಳಿಗೆ ಹೋಗುತ್ತಿದ್ದರು. ಈ ವೇಳೆ ಸವಾರನ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿ ಪಕ್ಕದ ಕಾಲುವೆಗೆ ಬಿದ್ದಿದ್ದರು. ನದಿಯಲ್ಲಿ ಓಂಕಾರ ಕೊಚ್ಚಿಕೊಂಡು ಹೋಗಿದ್ದು, ಅದೃಷ್ಟವಶಾತ್ ಜ್ಯೋತಿನಾಥ್ ಪ್ರಾಣಾಪಾಯದಿಂದ ಪಾರಾಗಿದ್ದ.
ಸುದ್ದಿ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರ ಜೊತೆಗೆ ಡಿಸಿಪಿ ಪಿ.ವಿ.ಸ್ನೇಹಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಎಸ್ಡಿಆರ್ಎಫ್ ತಂಡ ಕೂಡ ಆಗಮಿಸಿ ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದರು. ಆದರೂ, ಯುವಕನ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಿ, ಯುವಕನ ಮೃತದೇಹ ಪತ್ತೆ ಮಾಡಲಾಗಿದೆ. ನದಿಯಿಂದ ಶವ ಹೊರ ತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.