ಬೆಂಗಳೂರು:ಪ್ರಿಯಕರನೊಬ್ಬ ಚಾಕುವಿನಿಂದ ತನ್ನ ಪ್ರೇಯಸಿಯ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಜಯನಗರದ ಶಾಲಿನಿ ಗ್ರೌಂಡ್ ಬಳಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಕೋಲ್ಕತ್ತಾ ಮೂಲದ ಫರೀದಾ ಖಾನಂ (42) ಮೃತ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರದ 6ನೇ ಬ್ಲಾಕ್ ನಿವಾಸಿ ಗಿರೀಶ್ ರೆಹಾನ್ (32) ನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗಿರೀಶ್ ಮತ್ತು ಹತ್ಯೆಯಾದ ಮಹಿಳೆ ಫರೀದಾ ಖಾನಂ ಇಬ್ಬರು ಪ್ರೇಮಿಗಳಾಗಿದ್ದು, ಜೆ.ಪಿ ನಗರದ ಓಯೋ ರೂಮ್ನಲ್ಲಿ ಒಟ್ಟಿಗೆ ಇದ್ದರು. ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದ ಫರೀದಾಳಿಗೆ ಕೆಲಸ ಬಿಡುವಂತೆ ಗಿರೀಶ್ ಒತ್ತಾಯಿಸಿದ್ದ. ಆದರೂ ಸಹ ಕೆಲಸ ಬಿಡಲೊಪ್ಪದಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇಂದು ಜಯನಗರದ ಶಾಲಿನಿ ಮೈದಾನದ ಬಳಿ ಬಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಸಹ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಗಿರೀಶ್, ಫರೀದಾಳ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.