ಕೊಪ್ಪಳ:ಮಹಾಕುಂಭಮೇಳಕ್ಕೆ ತೆರಳಿದ್ದ ಯುವಕನೋರ್ವ ವಿದ್ಯುತ್ ತಗುಲಿ ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಜರುಗಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪುರ ನಿವಾಸಿ ಪ್ರವೀಣ್ ಹೊಸಮನಿ(27) ಮೃತರು.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರವೀಣ್ ಕಳೆದ 15 ದಿನದ ಹಿಂದೆಯೇ ಮಹಾ ಕುಂಭಮೇಳಕ್ಕೆ ತೆರಳಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನವನ್ನೂ ಮಾಡಿದ್ದರು. ಬಳಿಕ ರಾಮನ ದರ್ಶನ ಪಡೆಯಲೆಂದು ಪ್ರಯಾಗ್ರಾಜ್ನಿಂದ ಅಯೋಧ್ಯೆಗೆ ಹೊರಟಿದ್ದರು. ಆದರೆ, ಈ ವೇಳೆ ಮಾರ್ಗಮಧ್ಯೆ ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಗುಲಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯರ ಸಹಕಾರದಿಂದ ಪೊಲೀಸರು, ಗೋರಖ್ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ.