ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಫಲಕ ಪ್ರದರ್ಶಿಸಲೇಬೇಕು: ಹೈಕೋರ್ಟ್

ವ್ಯಾಪಾರ ವಹಿವಾಟು ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು, ಇದಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : 7 hours ago

ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂದು ಭಾರತೀಯ ರಿಟೇಲರ್ಸ್ ಅಸೋಸಿಯೇಷನ್​ಗೆ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ವಾಣಿಜ್ಯ ಮತ್ತು ಇತರೆ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಲೇಬೇಕೆಂಬ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನ.1ರಂದು ಕನ್ನಡ ರಾಜ್ಯೋತ್ಸವ ಇದೆ, ಆನಂತರ ರಾಜ್ಯದಲ್ಲಿ ಕನ್ನಡ ಅಭಿಯಾನ ಆರಂಭವಾಗಲಿದೆ, ಹಾಗಾಗಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪೀಠ, ನೀವು (ವಾಣಿಜ್ಯ ಸಂಸ್ಥೆಗಳು ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದ ಮೇಲೆ ನೀವು ಕನ್ನಡ ಭಾಷೆಯಲ್ಲಿಯೇ ಸೂಚನಾ ಫಲಕಗಳನ್ನು ಪ್ರದರ್ಶಿಸಲೇಬೇಕು, ಅದಕ್ಕೆ ಯಾವುದೇ ವಿನಾಯ್ತಿ ನೀಡಲಾಗದು ಎಂದು ಮೌಖಿಕವಾಗಿ ಹೇಳಿದರು.

ಅಲ್ಲದೆ, ತುರ್ತು ವಿಚಾರಣೆಯ ಮನವಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಕಳೆದ ಮಾ.18ರಂದು ನೀಡಿದ್ದ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂಬ ಮಧ್ಯಂತರ ಆದೇಶವನ್ನು ಮುಂದುವರಿಸಿ ವಿಚಾರಣೆಯನ್ನು ಮುಂದೂಡಿತು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ 2022ಗೆ ತಿದ್ದುಪಡಿ ತರುವ ಮೂಲಕ 2024ರ ಫೆ.26ರಂದು ಸರ್ಕಾರ ಎಲ್ಲ ವಾಣಿಜ್ಯ ಸಂಸ್ಥೆಗಳು ತಮ್ಮ ಬೋರ್ಡ್​ಗಳಲ್ಲಿ ಶೇ.60ರಷ್ಟು ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲೇಬೇಕೆಂದು ಆದೇಶ ಹೊರಡಿಸಿತ್ತು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆ 2022ಕ್ಕೆ 2024ರಲ್ಲಿ ಮಾಡಿರುವ ತಿದ್ದುಪಡಿಯನ್ನು ಅರ್ಜಿದಾರರು ಪ್ರಶ್ನಿಸಿದ್ದು, ಅದು ಅಸಂವಿಧಾನಿಕ ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ ಮತ್ತು ಟ್ರೇಡ್ ಮಾರ್ಕ್ ಕಾಯಿದೆಗೆ ವಿರುದ್ಧವಾಗಿದೆ. ಹಾಗಾಗಿ ತಿದ್ದುಪಡಿ ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಇಲಾಖೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ: ಮುಖ್ಯ ಕಾರ್ಯದರ್ಶಿ ಆದೇಶ - Kannada Mandatory

ABOUT THE AUTHOR

...view details