ಬೆಂಗಳೂರು:ಬಿಜೆಪಿ ಕಾರ್ಯಕರ್ತ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿ ಬಸವರಾಜ್ ಮುತ್ತಗಿ ಅವರ ಮಾಫಿ ಸಾಕ್ಷಿಯಾಗಿರುವ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತು.
ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಡೆಸಿತು. ಈ ವೇಳೆ ವಿನಯ್ ಕುಲಕರ್ಣಿ ಪರ ವಕೀಲ, ಆರೋಪಿ ಬಸವರಾಜ್ ಮುತ್ತಗಿ ಹೇಳಿಕೆಯನ್ನು ಪರಿಗಣಿಸುವಾಗ ಸೂಕ್ತ ಕಾನೂನು ಕ್ರಮಗಳ ಪಾಲಿಸಿಲ್ಲ. ಹಾಗಾಗಿ, ಸೆಷನ್ಸ್ ಕೋರ್ಟ್ ಬಸವರಾಜ್ ಮುತ್ತಗಿಯನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿರುವ ಕ್ರಮವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಬಸವರಾಜ್ ಮುತ್ತಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ - 1973ರ (ಸಿಆರ್‌ಪಿಸಿ) ಕಲಂ 306ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಗುಣವಾಗಿ ಸೆಷನ್ಸ್ ನ್ಯಾಯಾಲಯ ಸಿಆರ್‌ಪಿಸಿ ಕಲಂ 164ರ ಅಡಿಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ ಎಂದರು.
ಅಲ್ಲದೇ, ಇದಕ್ಕೂ ಮುನ್ನ ಬಸವರಾಜ್ ಮುತ್ತಗಿ ಪ್ರಕರಣದ ತನಿಖಾಧಿಕಾರಿಗೆ ಈ ಸಂಬಂಧ ಪತ್ರಗಳನ್ನು ಬರೆದಿದ್ದು, ಅದರಲ್ಲಿ ಹಲವು ಸತ್ಯಾಂಶಗಳನ್ನು ವಿವರಿಸಿದ್ದಾರೆ. ಹೀಗಾಗಿ, 164ರ ಹೇಳಿಕೆ ದಾಖಲೆಯಲ್ಲಿ ಯಾವುದೇ ಕಾನೂನು ಪಾಲನೆಯ ಲೋಪವಾಗಿಲ್ಲ ಎಂದು ವಿವರಿಸಿದರು. ವಾದ, ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿತು.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಕೇಸ್: ಬಸವರಾಜ ಮುತ್ತಗಿ ಸಾಕ್ಷ್ಯ ವಿಚಾರಣೆ ನಡೆಸದಂತೆ ಹೈಕೋರ್ಟ್ ಸೂಚನೆ