ಕರ್ನಾಟಕ

karnataka

ETV Bharat / state

ಸತ್ತಂತೆ ನಟಿಸಿ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಯೋಗ ಶಿಕ್ಷಕಿ ಪ್ರಕರಣ: ಮಹಿಳೆ ಸೇರಿ 6 ಆರೋಪಿಗಳ ಬಂಧನ

ಯೋಗ ಶಿಕ್ಷಕಿಯನ್ನು ಅಪಹರಿಸಿ, ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ 6 ಮಂದಿ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ.

YOGA TEACHER KIDNAP CASE
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : 6 hours ago

Updated : 5 hours ago

ಚಿಕ್ಕಬಳ್ಳಾಪುರ:ಚಿಂತಾಮಣಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಟೆಕ್ಟಿವ್ ಏಜೆನ್ಸಿ ಮಾಲೀಕ, ಸುಪಾರಿ ನೀಡಿದ್ದ ಮಹಿಳೆ ಸೇರಿ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ ರೆಡ್ಡಿ, ಗ್ಯಾಂಗ್ ನಾಗೇಂದ್ರ ರೆಡ್ಡಿ, ರಮಣಾ ರೆಡ್ಡಿ, ರವಿಚಂದ್ರ, ಬಿಂದು ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ (ETV Bharat)

''ಗಂಡನಿಂದ ದೂರವಾಗಿದ್ದ ತಾನು, ಬೆಂಗಳೂರಿನ ಅಪಾರ್ಟಮೆಂಟ್​ವೊಂದರಲ್ಲಿ ವಾಸವಾಗಿರುವೆ. ಸತೀಶ್‌ ರೆಡ್ಡಿ ಮತ್ತು ಗ್ಯಾಂಗ್‌ನ ಮೂವರು ಅಕ್ಟೋಬರ್ 23ರಂದು ತನ್ನನ್ನು ಅಪಹರಿಸಿ ದಿಬ್ಬೂರುಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಧನಮಿಟ್ಟೇನಹಳ್ಳಿ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದರು. ನಾನು ಬರಲ್ಲವೆಂದರೂ ತನ್ನ ಬಾಯಿ ಮುಚ್ಚಿ ಬಲವಂತವಾಗಿ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಪ್ರತಿರೋದ ವ್ಯಕ್ತಪಡಿಸಿದಾಗ ಸತೀಶ್‌ ರೆಡ್ಡಿ ತನ್ನ ತಲೆಗೆ ಪಿಸ್ತೂಲ್​ ಇಟ್ಟು ಸೈಲಂಟಾಗಿರುವಂತೆ ಬೆದರಿಕೆ ಹಾಕಿದ. ಈ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆಗೆ ಯತ್ನಿಸಿದ್ದಾನೆ. ಬಳಿಕ ಕಾರಿನಲ್ಲಿದ್ದ ಚಾರ್ಜರ್ ವೈರ್​​ನಿಂದ ಕುತ್ತಿಗೆಗೆ ಬಲವಾಗಿ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾರೆ. ತನ್ನನ್ನು ಅರೆಬೆತ್ತಲೆಗೊಳಿಸಿ ಸಂತೋಷ ಕುಮಾರ್ ಜೊತೆ ಸಲುಗೆಯಿಂದ ಇರುವ ಬಗ್ಗೆ ಒಪ್ಪಿಕೊಳ್ಳುವಂತೆ ಇನ್ನಿಲ್ಲದ ತೊಂದರೆ ನೀಡಿದ್ದಾರೆ. ವೈರ್​ನಿಂದ ಕುತ್ತಿಗೆ ಬಿಗಿದಾಗ ನಾಲಿಗೆ ಹೊರ ಚಾಚಿ ಸತ್ತಂತೆ ನಾಟಕ ಮಾಡಿದೆ. ಸತ್ತು ಹೋಗಿದ್ದಾಳೆಂದು ತಿಳಿದು ಗುಂಡಿ ತೋಡಿ ತನ್ನ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ಅವರು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದು ಧನಮಿಟ್ಟೇನ ಹಳ್ಳಿಯಲ್ಲಿ ಸ್ಥಳೀಯರ ಮನೆಗೆ ಹೋಗಿ ಘಟನೆ ವಿವರಿಸಿದೆ. ಆ ಬಳಿಕ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆ'' ಎಂದು ಯೋಗ ಶಿಕ್ಷಕಿ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ಪತಿ ಸಂತೋಷ ಕುಮಾರ್ ಜೊತೆ ಸಲುಗೆಯಿಂದ ಇದ್ದಾಳೆಂದು ತಿಳಿದು ಬಂಧಿತ ಆರೋಪಿ ಬಿಂದು, ಯೋಗ ಶಿಕ್ಷಕಿಯನ್ನು ಅಪಹರಿಸಿ ಕೊಲೆಗೆ ಸಂಚು ರೂಪಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

''ಯೋಗ ಶಿಕ್ಷಕಿ ನೀಡಿದ ದೂರಿನ ಅನ್ವಯ ದಿಬ್ಬೂರಹಳ್ಳಿ ಪೊಲೀಸರು ಸುಪಾರಿ ನೀಡಿದ್ದ ಬಿಂದು ಹಾಗೂ ಅಪಹರಿಸಿದ್ದ ಸತೀಶ್ ರೆಡ್ಡಿ, ನಾಗೇಂದ್ರ ರೆಡ್ಡಿ, ರಮಣಾ ರೆಡ್ಡಿ, ರವಿಚಂದ್ರ ಸೇರಿ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.

ಚಿಂತಾಮಣಿ ಉಪವಿಭಾಗ ವ್ಯಾಪ್ತಿಯ ಡಿವೈಎಸ್‌ಪಿ ಪಿ.ಮರಳೀಧರ್ ಅವರ ಸಹಕಾರದೊಂದಿಗೆ ಎಸ್‌ಪಿ ಕುಶಲ್ ಚೌಕ್ಸೆ ಅರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು.

ಇದನ್ನೂ ಓದಿ: ಮಾಜಿ ಪ್ರಿಯಕರನ ಮೊಬೈಲ್ ಸುಲಿಗೆ ಮಾಡಲು ಸುಪಾರಿ ನೀಡಿದ ಮಹಿಳಾ ಟೆಕ್ಕಿ ಸೇರಿದಂತೆ ಐವರ ಬಂಧನ - Supari to extort ex lover mobile

Last Updated : 5 hours ago

ABOUT THE AUTHOR

...view details