ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದರೂ ಕೊಂಚ ಇಳಿಮುಖ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವಾರ ರೆಡ್ ಮತ್ತು ಆರಂಜ್ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆ, ಶನಿವಾರದಿಂದ ಮೂರು ದಿನಗಳಿಗೆ ಅನ್ವಯವಾಗುವಂತೆ ಯೆಲ್ಲೋ ಅಲರ್ಟ್ ನೀಡಿದೆ. ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಕೂಡ ಸೂಚಿಸಿದೆ.
ಕರಾವಳಿ ಜಿಲ್ಲೆಯ ಹಲವು ಸ್ಥಳಗಳಲ್ಲಿ, ಉತ್ತರ ಒಳನಾಡಿನ ಕೆಲವು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಮುಂದುವರೆಯಲಿದೆ. ಶುಕ್ರವಾರ ಬೆಳಗ್ಗೆಯವರೆಗೆ ಅತಿ ಹೆಚ್ಚು ಮಳೆ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 8 ಸೆ.ಮೀ ಮಳೆಯಾಗಿದೆ. ಇನ್ನು ಉಡುಪಿಯ ಕೋಟದಲ್ಲಿ 7, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 6, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 5 ಸೆ.ಮೀ, ಉಪ್ಪಿನಂಗಡಿಯಲ್ಲಿ 4 ಸೆ.ಮೀ ಮಳೆ ಬಂದಿದೆ. ಉಳಿದಂತೆ ಪುತ್ತೂರಿನ ಹೆಚ್ಎಂಎಸ್, ಮೂಲ್ಕಿ, ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲೂ ಉತ್ತಮ ಮಳೆ ಸುರಿದಿದೆ.