ಬೆಂಗಳೂರು:ಪ್ರಚಂಡ ಬಹುಮತದೊಂದಿಗೆ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವರ್ಷದ ಹರುಷದಲ್ಲಿದೆ. ತನ್ನ ಒಂದು ವರ್ಷದ ಆಡಳಿತ ಬಹುವಾಗಿ ಪಂಚ ಗ್ಯಾರಂಟಿಗಳ ಅನುಷ್ಠಾನ, ನಿರ್ವಹಣೆ ಕೇಂದ್ರೀಕೃತವಾಗಿತ್ತು. ವರ್ಷ ಪೂರೈಸುತ್ತಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಹೊರೆಯ ಸವಾಲಿನೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸುತ್ತಿದೆ. ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ವರ್ಷದ ಹರುಷದಲ್ಲಿದೆ. ಒಂದು ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯ ಸರ್ಕಾರ ತಮ್ಮ ಚುನಾವಣೆಯ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೇ ಬಹು ಮುಖ್ಯವಾಗಿ ಆದ್ಯತೆ ನೀಡಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಹಾಗೂ ಯುವನಿಧಿ ಯೋಜನೆ ಜಾರಿಗೆ ಹೆಚ್ಚು ಕಸರತ್ತು ನಡೆಸಿದೆ.
ಒಂದು ವರ್ಷದಲ್ಲಿ ಪಂಚ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದೆ. ವಾರ್ಷಿಕ ಸುಮಾರು 40 ಸಾವಿರ ಕೋಟಿ ರೂ. ವೆಚ್ಚದ ಈ ಪಂಚ ಗ್ಯಾರಂಟಿಗಳಿಗೆ ಆದಾಯ ಸಂಗ್ರಹ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಿನ ವಿಚಾರವಾಗಿತ್ತು. ಹೆಚ್ಚಿನ ಗೊಂದಲ ಇಲ್ಲದೆ ಪಂಚ ಗ್ಯಾರಂಟಿ ಅನುಷ್ಠಾನ ಜೊತೆಗೆ ರಾಜ್ಯದ ಅಭಿವೃದ್ಧಿಗೂ ವೇಗ ನೀಡುವ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ್ದಾಗಿತ್ತು.
ಗ್ಯಾರಂಟಿ ಅನುದಾನ ಹೊಂದಾಣಿಕೆಯದ್ದೇ ಕಸರತ್ತು : ಒಂದು ವರ್ಷದ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರಲು ಸಂಪನ್ಮೂಲ ಕೂಡಿಸುವುದು ದೊಡ್ಡ ಸವಾಲು ಆಗಿತ್ತು. ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಮೊದಲ ವರ್ಷ ಸುಮಾರು 40,000 ಕೋಟಿ ರೂ. ಅಗತ್ಯವಿತ್ತು. ಇಷ್ಟು ದೊಡ್ಡ ಪ್ರಮಾಣದ ಅನುದಾನ ಸಂಗ್ರಹದ ಬಗ್ಗೆ ಹಣಕಾಸು ಇಲಾಖೆಯೂ ತನ್ನ ಅಸಹಾಯಕತೆ ವ್ಯಕ್ತಪಡಿಸಿತ್ತು. ಇದರಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದ್ದು, ಅಭಿವೃದ್ಧಿ ಕೆಲಸಗಳು ಕುಂಠಿತವಾಗುವ ಆತಂಕ ಇತ್ತು. ಇದರ ಮಧ್ಯೆ ರಾಜ್ಯಕ್ಮೆ ಎದುರಾದ ಭೀಕರ ಬರಗಾಲ ಕಾಂಗ್ರೆಸ್ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆಯಿತು.
ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ಬಹುವಾಗಿ ಸಂಪನ್ಮೂಲ ಕ್ರೋಢೀಕರಣದ ಕಸರತ್ತಿನಲ್ಲೇ ತೊಡಗಿತು. ಆದಾಯ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗದಿರುವುದು ಸಿಎಂ ಸಿದ್ದರಾಮಯ್ಯಗೆ ದೊಡ್ಡ ಸಂಕಷ್ಟ ಉಂಟು ಮಾಡಿತು. ಗ್ಯಾರಂಟಿ ಕಾರಣ ಇತರ ಇಲಾಖೆಗಳಿಗೆ ಅನುದಾನ ಕಡಿತ ಮಾಡುವ ಮೂಲಕ ಹಣ ಹೊಂದಾಣಿಕೆ ಕಸರತ್ತು ಮಾಡಲಾಯಿತು. ಇತ್ತ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆ ಎದುರಾದ ಕಾರಣ ಸ್ವಪಕ್ಷೀಯರೇ ಬಹಿರಂಗ ಅಸಮಾಧಾನ ಹೊರಹಾಕಲು ಆರಂಭಿಸಿದ್ದರು.
ಸ್ವಪಕ್ಷೀಯರ ಅಸಮಾಧಾನ ತಣಿಸಿ, ಅಭಿವೃದ್ಧಿಗೂ ಚ್ಯುತಿ ಬಾರದಂತೆ ಪಂಚ ಗ್ಯಾರಂಟಿ ಜಾರಿಗೊಳಿಸುವ ಅನಿವಾರ್ಯತೆ, ಸವಾಲಿನಲ್ಲೇ ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಆಡಳಿತವನ್ನು ಪೂರೈಸಿದೆ. ಬರದ ಹೊರೆ, ಆದಾಯ ಕೊರತೆಯ ಮಧ್ಯೆ ಕಸರತ್ತು ನಡೆಸಿ ಪಂಚ ಗ್ಯಾರಂಟಿಗೆ ಚ್ಯುತಿ ಬಾರದಂತೆ ತನ್ನ ಒಂದು ವರ್ಷದ ಆಡಳಿತದಲ್ಲಿ ಹಣ ಹೊಂದಿಸುವಲ್ಲಿ ಯಶಸ್ಸು ಕಂಡಿದೆ.
ಶಕ್ತಿ ಯೋಜನೆಗೆ ಅನುದಾನ ಬಿಡುಗಡೆ : ಶಕ್ತಿ ಯೋಜನೆಗೆ ಸರ್ಕಾರ 2023-24 ಸಾಲಿನ ತನ್ನ ಮೊದಲ ವರ್ಷದಲ್ಲಿ ಒಟ್ಟು 2,800 ಅನುದಾನ ಹಂಚಿಕೆ ಮಾಡಿದೆ. ಜೂನ್ 11 2023ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಸರ್ಕಾರ ಆರಂಭಿಸಿತು. ಮಾರ್ಚ್ ಅಂತ್ಯದವರೆಗೆ ಶಕ್ತಿ ಯೋಜನೆಯಡಿ ಸುಮಾರು 190 ಕೋಟಿ (ಒಟ್ಟು ಸಂಚಾರ) ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸಿದ್ದಾರೆ.
ಕೆಡಿಪಿ ಪ್ರಗತಿ ವರದಿ ಪ್ರಕಾರ ಹಣಕಾಸು ವರ್ಷದ ಮಾರ್ಚ್ ಅಂತ್ಯದವರೆಗೆ ಶಕ್ತಿ ಯೋಜನೆಗಾಗಿ ಅಂದಾಜಿಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಯಿತು. ಒಟ್ಟು 3,200 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಾಯಿತು. 2023-24 ಹಣಕಾಸು ವರ್ಷ ಅಂತ್ಯಕ್ಕೆ ಯೋಜನೆಗಾಗಿ 3,200 ಕೋಟಿ ರೂ. ವರೆಗೆ ವೆಚ್ಚವಾಗಿದೆ. ಹೀಗಾಗಿ ಸರ್ಕಾರ ಬಜೆಟ್ ಅಂದಾಜಿಗಿಂತ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕಾಯಿತು.