ಮೈಸೂರು:"ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಸಿ.ಟಿ.ರವಿ ಆ ಪದ ಬಳಸಿರುವುದು ಸತ್ಯ. ಇದನ್ನು ಕೇಳಿ ನಾನೇ ಗಾಬರಿಯಾದೆ. ಈ ಬಗ್ಗೆ ತನಿಖೆಯಾದರೆ ಗೊತ್ತಾಗುತ್ತದೆ" ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಸದನದಲ್ಲಿ ಅವರಿಗಿಂತ ಹಿಂದಿನ ಎರಡು ಸೀಟುಗಳಲ್ಲಿ ಕುಳಿತಿದ್ದೆ. ಈ ಮಾತನ್ನು ಕೇಳಿ ನಾನೇ ಗಾಬರಿಯಾದೆ. ಹೀಗಿದ್ದರೂ ನಾಚಿಕೆಯಿಲ್ಲದೆ ಆ ಪದ ಬಳಸಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ" ಎಂದರು.
ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ (ETV Bharat) "ತಪ್ಪು ಮಾಡಿಲ್ಲ ಎನ್ನುತ್ತಾರೆ. ಆದರೆ, ಆರೋಪ ಇರುವವರೇ ಈ ರೀತಿ ಹೇಳುತ್ತಿದ್ದಾರೆ. ತನಿಖೆಯಾಗಲಿ. ಆರೋಪ ಸಾಬೀತಾಗುತ್ತದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅವರು ಪ್ರಾಸ್ಟಿಟ್ಯೂಟ್ ಎಂಬ ಪದ ಬಳಸಿದ್ದಾರೆ. ಇದು ಸತ್ಯ. ನಾನೇ ಸದನದಲ್ಲಿ ಈ ಪದವನ್ನು ಕಿವಿಯಾರೆ ಕೇಳಿದ್ದೇನೆ" ಎಂದು ಹೇಳಿದರು.
"ಸದನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಸಿ.ಟಿ.ರವಿಗೆ ಕೊಲೆಗಾರ ಎಂದು ಹೇಳುತ್ತಿದ್ದರು. ಅದಕ್ಕೆ ಸಿ.ಟಿ.ರವಿ ಪ್ರಾಸ್ಟಿಟ್ಯೂಟ್ ಎಂಬ ಪದವನ್ನು ಹಲವು ಬಾರಿ ಬಳಸಿದರು. ಇದನ್ನು ಕೇಳಿ ನಾನೇ ಗಾಬರಿಯಾದೆ. ಈ ಮಾತನ್ನು ನನಗೆ ನಂಬಲಿಕ್ಕೆ ಆಗಲಿಲ್ಲ. ಅದಕ್ಕೆ ಅವರನ್ನೇ ಕೇಳೋಣ ಎಂದು ಹೆಬ್ಬಾಳ್ಕರ್ ಇದ್ದಲ್ಲಿಗೆ ಹೋಗುತ್ತಿದ್ದೆ. ಆಗ ಅವರು ಕೂಡಾ ತಿರುಗಿ ಹಿಂದೆ ಬರುತ್ತಿದ್ದರು. ನಾವಿಬ್ಬರೂ ಬಿ.ಕೆ.ಹರಿಪ್ರಸಾದ್ ಅವರ ಸೀಟ್ ಬಳಿ ಹೋದ್ವಿ. ಆಗ ಅವರು ಹಾಗೆ ಹೇಳಿದ್ರು ಅಂದ್ರು. ನಂತರ ನಾವು ಸಭಾಪತಿಗೆ ಹೋಗಿ ದೂರು ನೀಡಿದೆವು" ಎಂದರು.
ಪೊಲೀಸರು ಅವರನ್ನು ರಾತ್ರಿಯೆಲ್ಲಾ ಸುತ್ತಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಸುಮ್ನೆ ಡ್ರಾಮಾ ಮಾಡುತ್ತಿದ್ದಾರೆ ಅಷ್ಟೇ. ಎಂಎಲ್ಸಿಗೆ ಪೊಲೀಸರು ಕಿರುಕುಳ ಕೊಡ್ತಾರಾ? ಖಂಡಿತಾ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ. ಅಷ್ಟಕ್ಕೆ ಇವರು ಕೊಲೆ ಮಾಡಲು ಹೋಗಿದ್ದಾರೆ ಎಂದು ಡ್ರಾಮಾ ಮಾಡ್ತಾರಲ್ಲ? ಪೊಲೀಸರು ಅವರ ಕರ್ತವ್ಯ ನಿರ್ವಹಿಸಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ:ಸಿ ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೆ ದೂರು ಕೊಡುತ್ತೇನೆ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - MINISTER LAKSHMI HEBBALKAR