ಪ್ರಣವಾನಂದ ಸ್ವಾಮೀಜಿ ಹೇಳಿಕೆ (ETV Bharat) ಕಾರವಾರ: ಶಿರೂರು ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಎನ್ಎಚ್ಎಐನ ಮುಖ್ಯಸ್ಥರು ಹಾಗೂ ಪ್ರಾದೇಶಿಕ ಕಚೇರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಈಡಿಗ ಸಮುದಾಯದ ಏಳು ಜನಸೇರಿ ಒಟ್ಟು 11 ಮಂದಿ ಮೃತರಾಗಿದ್ದಾರೆ. ಅಂಕೋಲಾ ಠಾಣೆಯಲ್ಲಿ ಎನ್ಎಚ್ಎಐ ಹಾಗೂ ಐಆರ್ಬಿ ವಿರುದ್ಧ ದೂರು ನೀಡಿದರೂ ಎಫ್ಐಆರ್ ದಾಖಲಾಗಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಬಿಎನ್‌ಎಸ್ 175(3)ಯಡಿ ಪ್ರಕರಣ ದಾಖಲಿಸಿ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಅಂಕೋಲಾ ಪೊಲೀಸರಿಗೆ ಆದೇಶ ನೀಡಿದೆ ಎಂದರು.
ಇದಲ್ಲದೆ ಕೇಂದ್ರ ಸರ್ಕಾರದ ಎನ್ಎಚ್ಐಎನ ಈಗಿನ ಮುಖ್ಯಸ್ಥ ಸಂತೋಷ ಕುಮಾರ್ ಯಾದವ, ರಾಜ್ಯ ರೀಜನಲ್ ಅಧಿಕಾರಿ ಬ್ರಾಹ್ಮಣಕರ, ರಾಜ್ಯ ವ್ಯವಸ್ಥಾಪಕ ಪಂಕಜ ಆಸ್ತಿ, ಹೊನ್ನಾವರ ಯೋಜನಾ ನಿರ್ದೇಶಕ ಹರಿಕೃಷ್ಣ ಅವರ ವಿರುದದ್ಧ ರಿಟ್ ಅರ್ಜಿ ಹಾಗೂ ಇಡಿ ಮತ್ತು ಲೋಕಾಯುಕ್ತದಲ್ಲಿ ದೂರು ನೀಡುತ್ತೇನೆ ಎಂದು ತಿಳಿಸಿದರು.
ಜಿಲ್ಲೆಯ ಕಾರವಾರದಿಂದ ಭಟ್ಕಳದವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಒಟ್ಟೂ ಯೋಜನೆಗೆ 539 ಕೋಟಿ ರೂ. ಹಾಗೂ ಕಾಮಗಾರಿಯಲ್ಲಿ ತೊಂದರೆ ಹಾಗೂ ಪ್ರಾಕೃತಿಕ ವಿಕೋಪವಾದರೆ ಒಟ್ಟೂ ಮೊತ್ತದ ಶೇ.40 ಅಂದರೆ 214 ಕೋಟಿ ಮೀಸಲಿಡಲಾಗಿದೆ ಎಂದು ಬಗ್ಗೆ ಕರಾರು ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಎನ್ಎಚ್ಎಐ ಅವರಿಂದ ಈವರೆಗೆ ಪರಿಹಾರ ಬಂದಿಲ್ಲ ಎಂದರು.
ಜಿಲ್ಲೆಯ ಯೋಜನೆಗಳ ಪೈಕಿ 13ರಲ್ಲಿ ಖಾಸಗಿ ಕಂಪನಿಗಳು ಕೆಲಸ ಮಾಡುತ್ತಿವೆ. ಅದರಲ್ಲಿ ಕಂಪನಿ ಬೇರೆ ಆದರೂ ಮಾಲೀಕರು ಮಾತ್ರ ಒಂದೆ. ಹೀಗಾಗಿ ಅವೆಲ್ಲ ಯೋಜನೆಗಳು ನಿಲ್ಲಬೇಕು. ಇದರ ಹಿಂದೆ ಇರುವ ಜಿಲ್ಲೆಯ ರಾಜಕಾರಣಿಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇವೆ. ಎನ್ಎಚ್ಐಎ ಹಾಗೂ ಐಆರ್ಬಿ ಕಂಪನಿಯ ಲೂಟಿಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಜತೆಗೆ ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಸಿಗಬೇಕು. ಅಲ್ಲಿಯವರೆಗೆ ಹೋರಾಟ ನಿಲ್ಲುವುದಿಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯ ಸಿಗದಿದ್ದರೆ ಶಿರೂರಿನಿಂದ ಸಂಸತ್ ಭವನದ ವರೆಗೂ ಪಾದಯಾತ್ರೆ ಮಾಡಲೂ ಕೂಡ ಹಿಂಜರಿಯುವುದಿಲ್ಲ ಎಂದು ಹೇಳಿದರು.
ಮಹಾ ಮಂಡಳಿಯ ಯುವ ಘಟಕದ ಸಚಿನ ನಾಯ್ಕ, ಕಾಣೆಯಾದ ಲೋಕೇಶ ನಾಯ್ಕ ಅವರ ತಾಯಿ ಮಾಹಾದೇವಿ, ಜಗನ್ನಾತ ಅವರ ಪುತ್ರಿ ಕೃತಿಕ, ಶಾಂತಿ ನಾಯ್ಕ ಸಹೋದರ ಶ್ರೀನಿವಾಸ, ಶ್ರೀಧರ ನಾಯ್ಕ, ಮಂಡಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ನಾಯ್ಕ ಈ ವೇಳೆ ಇದ್ದರು.
ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ: ಗಂಗಾವಳಿಯಲ್ಲಿ ಈಶ್ವರ್ ಮಲ್ಪೆ ಕಾರ್ಯಾಚರಣೆ, ಲಾರಿ ವೀಲ್ ಜಾಕ್ ಪತ್ತೆ - Shiruru Hill Collapse