ಬೆಂಗಳೂರು:ತೃತೀಯ ಲಿಂಗಿಯನ್ನು ಕೊಲೆ ಮಾಡಿದ್ದ ಆರೋಪಿ ಮಹಿಳೆಯನ್ನು ಜೀವನ್ ಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜು ನಾಯ್ಕ್ (42) ಎಂಬ ತೃತೀಯ ಲಿಂಗಿಯನ್ನು ಹತ್ಯೆ ಆರೋಪದ ಮೇಲೆ ಪ್ರೇಮಾ (51) ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ಮೇ 3ರಂದು ಜೀವನ್ ಭೀಮಾನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜು ನಾಯ್ಕ್ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ, ಮರಣೋತ್ತರ ಪರೀಕ್ಷೆಯಲ್ಲಿ ಮಂಜು ನಾಯ್ಕ್ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ತಿಳಿದು ಬಂದಿತ್ತು.
ಮೃತನೊಂದಿಗೆ ವಾಸವಿದ್ದ ಪ್ರೇಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ವಿಚಾರ ಬಯಲಾಗಿದೆ. ಆರೋಪಿ ಪ್ರೇಮಾ ತನ್ನ ಪತಿಯ ನಿಧನದ ಬಳಿಕ ಕಳೆದ 20 ವರ್ಷದಿಂದ ಮಂಜು ನಾಯ್ಕ್ ಜೊತೆ ವಾಸವಿದ್ದಳು. ಮಂಜು ನಾಯ್ಕ್ ಕಂಪನಿಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಮಂಜು ಹಾಕಿದ್ದ ಚೀಟಿ ಹಣವನ್ನು ಕೊಡುವಂತೆ ಪ್ರೇಮಾ ಕೇಳಿದ್ದಳು. ಏಪ್ರಿಲ್ 26 ರಂದು ಮದ್ಯದ ಅಮಲಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ ಮಂಜು ನಾಯ್ಕ್ನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರೇಮಾ ಟವೆಲ್ನಿಂದ ಆತನ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಆರೋಪಿತೆ ಪ್ರೇಮಾ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರುವ ತನ್ನ ತಾಯಿಯ ಮನೆಗೆ ತೆರಳಿದ್ದಳು. ಅಲ್ಲಿಂದ ಮಹಿಳೆಯನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೊಡಗು: ನಿಶ್ಚಿತಾರ್ಥ ಮುಂದೂಡಿಕೆಯಾಗಿದ್ದಕ್ಕೆ ಬಾಲಕಿಯ ಹತ್ಯೆಗೈದು ರುಂಡದೊಂದಿಗೆ ಆರೋಪಿ ಪರಾರಿ - Kodagu Girl Murder