ದಾವಣಗೆರೆ:ಕಳೆದ ವರ್ಷದಿಂದ ಬರಗಾಲ ಎಂಬ ಕಪ್ಪು ಛಾಯೆ ಕರ್ನಾಟಕವನ್ನು ಆವರಿಸಿದ್ದು, ತೀವ್ರ ಜಲಕ್ಷಾಮ ತಾಂಡವಾಡುತ್ತಿದೆ. ಪರಿಣಾಮವಾಗಿದಾವಣಗೆರೆ ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಹಾಗೆಯೇ ಹರಿಹರ ತಾಲೂಕಿನ ಐತಿಹಾಸಿಕ ಕೊಂಡಜ್ಜಿ ಕೆರೆ ಸಂಪೂರ್ಣ ಖಾಲಿಯಾಗಿದ್ದು, ಇಲ್ಲಿಗೆ ವಲಸೆ ಬರುತ್ತಿದ್ದ ವಿದೇಶಿ ಹಕ್ಕಿಗಳಿಗೂ ಬರಗಾಲದ ಬಿಸಿ ತಟ್ಟಿದೆ.
ನವೆಂಬರ್ ತಿಂಗಳಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತಿದ್ದ ವಿದೇಶಿ ಹಕ್ಕಿಗಳು ಮೇ ತಿಂಗಳ ಅಂತ್ಯದವರೆಗೂ ಕೊಂಡಜ್ಜಿ ಕೆರೆಯ ಅರಣ್ಯ ಧಾಮದಲ್ಲಿ ವಾಸವಾಗುತ್ತಿದ್ದವು. ಬಳಿಕ ತಮ್ಮ ಮೂಲ ಸ್ಥಳಕ್ಕೆ ವಿದೇಶಿ ಹಕ್ಕಿಗಳು ತೆರಳುತ್ತಿದ್ದವು. ಈ ಕೆರೆಗೆ ಪ್ರತಿ ವರ್ಷ ಸುಮಾರು ಐದು ಸಾವಿರದಷ್ಟು ವಿದೇಶಿ ಹಕ್ಕಿಗಳು ಬರುತ್ತಿದ್ದು, ಈ ಬಾರಿ ಕೆರೆಯಲ್ಲಿ ನೀರಿಲ್ಲದ ಕಾರಣಕ್ಕೆ ಹಕ್ಕಿಗಳ ಸಂಖ್ಯೆ 100ರ ಗಡಿ ದಾಟಿದೆ. ಚೀನಾ, ಜಪಾನ್, ಸೈಬಿರಿಯಾ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ರಷ್ಯಾ ಹಾಗೂ ಉತ್ತರ ಭಾರತ ಸೇರಿದಂತೆ ಯೂರೋಪಿನ ವಿವಿಧ ದೇಶಗಳಿಂದ 68 ಪ್ರಭೇದದ (ಜಾತಿಯ) ವಲಸೆ ಹಕ್ಕಿಗಳು ಆಗಮಿಸುವುದು ಇಲ್ಲಿನ ವಿಶೇಷ. ಇದೀಗ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗಿದೆ.