ವಿಜೇತ ಅಭ್ಯರ್ಥಿ ವಿ. ಸೋಮಣ್ಣ (ETV Bharat) ತುಮಕೂರು: ಎರಡೂ ವಿಧಾನಸಭೆ ಚುನಾವಣೆಯಲ್ಲಿ ಸೋತ ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟ ರಾಷ್ಟ್ರದ ನಾಯಕರು ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಜೇತ ಅಭ್ಯರ್ಥಿ ವಿ. ಸೋಮಣ್ಣ ತಿಳಿಸಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ ಮುದ್ದಹನುಮೇಗೌಡ ಅವರನ್ನು ಸತತವಾಗಿ ಹಿಂದಿಕ್ಕಿ, ಭರ್ಜರಿ ಗೆಲುವು ಕಂಡಿದ್ದಾರೆ.
ಫಲಿತಾಂಶದ ಬಳಿಕ ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದಿಂದ ಪುನಃ ರಾಜಕೀಯವಾಗಿ ಗೆಲುವು ಸಾಧಿಸಲು ಹಾಗೂ ಜನರ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ದೇಶದ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳು ಹಾಗೂ ಈ ಹಿಂದಿನ ಸಂಸದ ಬಸವರಾಜ ಅವರ ಮಾರ್ಗದರ್ಶನದಲ್ಲಿ ಈ ಗೆಲುವು ಲಭಿಸಿದೆ. ರಾಜ್ಯದ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಗಿನವರು ಎಂದು ನನಗೆ ಚುನಾವಣೆ ಸಂದರ್ಭದಲ್ಲಿ ಹೇಳಿದ್ದು ಒಳ್ಳೆಯದೇ ಆಯಿತು. ಈ ರೀತಿ ಹೇಳಿದವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮತದಾರರು ಅಂತಿಮವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ: ಮೈಸೂರು ಕ್ಷೇತ್ರದಲ್ಲಿ ಯದುವೀರ್ ಗೆಲುವು - Mysuru Loksabha Constituency
ಇಂಡಿಯಾ ಒಕ್ಕೂಟವು ನಡೆಸಿದ ಅಪಪ್ರಚಾರ ನಡುವೆಯೂ ಮೋದಿಯವರು ಪ್ರಧಾನಿಯಾಗಲಿದ್ದಾರೆ. ಸುಳ್ಳು ಕೂಡ ನಿಜವಾಗುತ್ತದೆ ಎಂಬುದಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ನನ್ನ ಕೆಲಸ ನೋಡಿ ತುಮಕೂರಿನ ಮತದಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮತದಾರರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ, ಅವರೊಂದಿಗೆ ಹೆಜ್ಜೆ ಹಾಕುತ್ತೇನೆ. ಜೆಡಿಎಸ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಿಜಕ್ಕೂ ಅಭಿನಂದನೆಗೆ ಅರ್ಹ ಎಂದು ಸೋಮಣ್ಣ ತಿಳಿಸಿದರು.